|| ಗುರುವೆ ನಿಮ್ಮಾಜ್ಞೆಯನು ||
ರಚನೆ : ಕೂಡಲೂರೇಶ
kannadabhajanlyrics.blogspot.com, belaguru Swamiji images |
ಗುರುವೆ ನಿಮ್ಮಾಜ್ಞೆಯನು ಮೀರದೆ ನಡೆದವನು
ನರನೆನ್ನಲು ಬೇಡ ಅವ ಪರಮಾತ್ಮನು ||ಪ||
ಅರಿಯದ ಮನುಜರು ಅವರೇನು ಬಲ್ಲರು |
ಪರಕೆ ಪರತರವಾದ ಪರವಸ್ತು ಅವನು ||ಅ.ಪ.||
ಹೆಪ್ಪು ಹಾಲಿಗೆ ಕೊಡಲು, ತುಪ್ಪ ಅದರೊಳಗಾಗಿ
ತುಪ್ಪ ಕೂಡುವುದೆ ಮರಳಿ ಹಾಲಿನೊಳು |
ನಿಷ್ಪತ್ತಿ ನಿಜರೂಪನಾದಂಥ ಪುರುಷನು
ಅಪ್ಪಿ ಸಂಸಾರಕ್ಕೆ ಒಳಗಾಗನವನು ||
ನದಿಯು ತಾ ಪುಟ್ಟಿ ಅದು ಸಮುದ್ರವ ಸೇರಲು
ನದಿಯು ತಾ ಪೋಗುವದೆ ಪುಟ್ಟದೆಡೆಗೆ |
ಸದಮಲ ಸುಜ್ಞಾನಿ ಪ್ರಪಂಚ ಮಾಡಲು
ಅದರೊಳು ಕೂಡಿದರೂ ಬೆರೆಯನು ಅವನು ||
ಮುತ್ತು ನೀರೊಳು ಪುಟ್ಟಿ, ಮತ್ತೆ ನೀರಾಗುವದೆ?
ಮುತ್ತು ಲಕ್ಷಾಂತರಕೆ ಬೆಲೆಯಾದೀತು |
ತತ್ವದ ಜ್ಞಾನಿಯವನು ಹುಟ್ಟುವ ನರನಲ್ಲ |
ಅತ್ಯಂತ ಆನಂದ ಪರಿಪೂರ್ಣನವನು ||
ಗರುಡನ ಮಂತ್ರವನ್ನು ಕಲಿತಿರುವಾತಗೆ
ಉರಗ ಕಚ್ಚಿದರೇನು ವಿಷವೇರುವದೆ |
ಪರಿಪರಿ ವಿಷಯದೊಳ್ ಮುಳುಗಾಡಿದರಾತಗೆ
ಧರ್ಮ ಕರ್ಮಗಳಿಂದ ಆತನಿಗೇನು ||
ಜಾತಿಯೊಳಗೆ ಹುಟ್ಟಿ ಅಜಾತನಾದವಗೆ
ಜಾತಿ ಧರ್ಮಗಳಿಂದ ಆತನಿಗೇನು |
ಜ್ಯೋತಿಪ್ರಕಾಶ ನಮ್ಮ ಕೂಡಲೂರೇಶನು
ದಾತ ಪ್ರಖ್ಯಾತ ಅವಧೂತನವನು ||
0 ಕಾಮೆಂಟ್‌ಗಳು