|| ಶಿವನಿಗೆ ಆರತಿ ಹಾಡು ||
ಆದಿಶಕ್ತಿಯ ಕಾಂತ ಆದಿಮೂರುತಿ ಪ್ರೀತ
ಸಾಧು ಸಜ್ಜನ ಸಂಪ್ರೀತ ಶ್ರೀ
ಶಂಕರನೇ ಪ್ರಾರ್ಥಿಪೆನೆ ನಿರತ
ಮಹೇಶ್ವರ ಭೇದರಹಿತ ಅಮರ
ಚಂದದಲಿ ಪೊರೆವ ನಂದಿವಾಹನ
ಚಂದ್ರಶೇಖರ ಕುಂದದೆ ಆನಂದ ಕೊಡುವ
ಸುಗಂಧ ಚಂದನ ಸುಮಂಗಳಿಂದ
ಮುಕುಂದ ಮಾಧವ ಪ್ರಿಯ ಮಹೇಶಗೆ
ಆನಂದದಲರ್ಚಿಪೆನು ಅಗಹರ
ವ್ಯಾಲ ಯಜ್ಞೋಪವೀತನೆ ನೀಲಕಂಠ
ತ್ರಿಶೂಲ ಪಾಣಿ ಪಾಲಿಸು
ನಿನ್ನಯ ನಾಮಾಮೃತ ಸುಧೆಯನು ಕುಡಿಸು
ಚಿನುಮಯ ಎನ್ನ ಜನ್ಮ ಸಾರ್ಥಕಗೊಳಿಸು
ಅಜ್ಞಾನಗಳ ಅಳಿಸು
ಕಾಣದಿರುವ ನಿನ್ನಲ್ಲಿ ಮೊರೆ ಇಡುತಿರುವೆ
ಹೇ ಪರಮೇಶ್ವರ ರಕ್ಷಿಸು ಎನುತ ವಂದಿಸಿ
ಪದ ಕಮಲಕೆ ಪರಿಪರಿಯ ಪುಷ್ಪವನು ಅರ್ಪಿಸಿ
ಜಯವೆಂದಾರತಿಯ ಬೆಳಗುವೆ
ಓಂಕಾರ ಪ್ರೀತ ಕಿಂಕರ ಪಾಲಿಪ
ಶ್ರೀ ಶಂಕರಿ ಪ್ರಿಯ ವಲ್ಲಭ
ತ್ರಿನೇತ್ರ ತ್ರೈಭುವನಕಾಧಾರ ಶಿವ
ನಿತ್ಯಾನಂದವಿತ್ತು ಪೊರೆವ ಮಹದೇವ
ಅವ್ಯಕ್ತ ರೂಪ ಭಕ್ತಿಯನು ಕರುಣಿಪುದು ಎನಗೆ
ಶಕ್ತಿ ಮುಕ್ತಿಯ ಪಥವ ತೋರ್ಪುದು
ಎನುತ ಪದ ಪದ್ಮದಲಿ ಬೇಡುತ
ವಿಧವಿಧದ ಅರ್ಚನೆ ಗೈಯುತ
ಜಯವೆಂದಾರತಿಯ ಬೆಳಗುವೆ ||ಶುಭಂ||
0 ಕಾಮೆಂಟ್‌ಗಳು