|| ಗುರು ಸ್ತುತಿ ||
kannadabhajanlyrics.blogspot.com, belaguru Swamiji images |
ಬಾರೋ ಎನ್ನ ಮನ ಮಂದಿರಕೆ ಗುರುವೆ
ತೋರೋ ನಿನ್ನಯ ಪಾದ ಪೂಜೆಗೈಯುವೆ||ಪ||
ಬಾರೋ ಬಾರೋ ಕರುಣಾಸಾಗರ
ನಿನ್ನ ಕಾರುಣ್ಯವನ್ನು ಬಯಸಿ ಶರಣು ಬಂದಿಹೆನು||ಅ.ಪ.||
ಭಕ್ತಿ ಭಾವಗಳರ್ಘ್ಯ ಪಾದ್ಯಾಚಮನವಿತ್ತು
ನಿತ್ಯನಿರ್ಮಲ ನಿನಗೆ ನೀರನೆರೆದು
ದತ್ತಾ ದಿಗಂಬರ ವಸ್ತ್ರವನು ಉಡಿಸುವೆನು
ಮುಕ್ತಿದಾಯಕ ನಿನ್ನ ಅರ್ಚಿಸುವೆ ದೇವಾ||೧||
ಚಿನುಮಯನೆ ನಿನಗೆ ಚಂದನ ಗಂಧ ಕುಂಕುಮದಿ
ತಿಲಕವನು ತಿದ್ದಿ ನಾ ಅಲಂಕರಿಸುವೆ
ಎನ್ನ ಮನದೊಳಗುದಿಪೊ ಸಂಕಲ್ಪ ಪುಷ್ಪವನು
ಘನ್ನಮಹಿಮನೆ ನಿನ್ನ ಪಾದಕರ್ಪಿಸುವೆ||೨||
ಪಾಪಹರ ಗುರುದೇವ ಪರಮಪುರಷನೆ ನಿನಗೆ
ಧೂಪ ದೀಪಾರತಿಯ ಬೆಳಗುವೆನು ಮುದದಿ
ಏಕ ಮನಸಿನೊಳು ಜಗದೇಕ ರೂಪನೆ ನಿನಗೆ
ಏಕಾರತಿಯ ಬೆಳಗಿ ನೈವೇದ್ಯಕ್ಕಿಡುವೆ||೩||
ಆನಂದ ನಿಧಿಯೇ ಎನ್ನಂತರಂಗದೊಳುದಿಪೋ
ಅನುಭವಾನಂದವು ನೈವೇದ್ಯವು
ಜ್ಞಾನ ಮೂರುತಿ ನಿನಗೆ ಮಂಗಳಾರತಿ ಬೆಳಗಿ
ಆನಂದದಿಂದಲಿ ಪಾದಕೆರಗುವೆನೋ ||೪||
ಅಜ್ಞಾನ ತಿಮಿರಾಂಧವಾಗಿಹ ಮನಕೆ
ಸುಜ್ಞಾನ ಚಂದಿರನೇ ದಯಮಾಡೋ ನೀ
ಪ್ರಜ್ಞೆಯನ್ನು ಪ್ರಜ್ವಲಿಸಿ ಪೂರ್ಣಪದದೊಳಗಿರಿಸಿ
ಉದ್ಧರಿಸೋ ಕರುಣದೊಳ್ ಕಲ್ಯಾಣವಿನುತಾ||೫||
0 ಕಾಮೆಂಟ್‌ಗಳು