ಲಾಲಿ ಗೋವಿಂದ ಲಾಲಿ ಕೌಸಲ್ಯ - Lali Govinda Laali

|| ಶ್ರೀರಾಮಕೃಷ್ಣ ಲಾಲಿಹಾಡು ||

ಕೀರ್ತನಕಾರರು : ಶ್ರೀಪಾದರಾಜರು

ರಾಗ : ಆನಂದಭೈರವಿ

ತಾಳ : ಝಂಪೆ





ಲಾಲಿ ಗೋವಿಂದ ಲಾಲಿ ಕೌಸಲ್ಯ

ಬಾಲ ಶ್ರೀರಾಮ ಲಾಲಿ ||ಪ||


ಲಾಲಿ ಮುನಿವಂದ್ಯ ಲಾಲಿ ಜಾನಕಿ

ರಮಣ ಶ್ರೀ ರಾಮ ಲಾಲಿ ||ಅ. ಪ||


ಕನಕರತ್ನಗಳಲ್ಲಿ ಕಾಲ್ಗಳನೆ ಹೂಡಿ

ನಾಲ್ಕು ವೇದಗಳನ್ನು ಸರಪಣಿಯ ಮಾಡಿ

ಅನೇಕ ಭೂಮಂಡಲವ ಹಲಗೆಯ ಮಾಡಿ

ಶ್ರೀಕಾಂತನ ಉಯ್ಯಾಲೆಯನು ವಿರಚಿಸಿದರು ||೧||


ಆಶ್ಚರ್ಯಜನಕವಾಗಿ ನಿರ್ಮಿಸಿದ

ಪಚ್ಚೆಯ ತೊಟ್ಟಿಲಲ್ಲಿ

ಅಚ್ಯುತಾನಂತನಿರಲು ತೂಗಿದರು

ಮತ್ಸ್ಯಾವತಾರ ಹರಿಯ ||೨||



ಧರ್ಮಸ್ಥಾಪಕನು ಎಂದು ನಿರವಧಿಕ

ನಿರ್ಮಲ ಚರಿತ್ರನೆಂದು

ಮರ್ಮ ಕರ್ಮಗಳ ಪಾಡಿ ತೂಗಿದರು

ಕೂರ್ಮಾವತಾರ ಹರಿಯ ||೩||


ಸರಸಿಜಾಕ್ಷಿಯರೆಲ್ಲರು ಜನವಶೀ

ಕರ ದಿವ್ಯರೂಪನೆಂದು

ಪರಮ ಹರುಷದಲಿ ಪಾಡಿ ತೂಗಿದರು

ವರಾಹವತಾರ ಹರಿಯ ||೪||


ಕರಿ ಕುಂಭಗಳ ಪೋಲುವ ಕುಚದಲ್ಲಿ

ಹಾರ ಪದಕವು ಹೊಳೆಯಲು

ವರವರ್ಣಿನಿಯರು ಪಾಡಿ ತೂಗಿದರು

ನರಸಿಂಹಾವತಾರ ಹರಿಯ ||೫||


ಭಾಮಾ ಮಣಿಯರೆಲ್ಲರು ಯದುವಂಶ

ಸೋಮನಿವನೆಂದು ಪೊಗಳಿ

ನೇಮದಿಂದಲಿ ಪಾಡಿ ತೂಗಿದರು

ವಾಮನವತಾರ ಹರಿಯ ||೬||


ಸಾಮಜ ವರದನೆಂದು ಅತುಳ

ಭ್ರೃಗು  ರಾಮವತಾರನೆಂದು

ಶ್ರೀ ಮದಾನಂದ ಹರಿಯ

ತೂಗಿದರು ಪ್ರೇಮಾತಿರೇಕದಿಂದ ||೭||


ಕಾಮನಿಗೆ ಕಾಮನೆಂದು ಸುರ

ಸಾರ್ವಭೌಮ ಗುಣಧಾಮನೆಂದು

ವಾಮನೇತ್ರೆಯರು ಪಾಡಿ ತೂಗಿದರು

ರಾಮಾವತಾರಿಯ ಹರಿಯ ||೮||


ಸೃಷ್ಟಿಯ ಕರ್ತನೆಂದು ಜಗದೊಳಗೆ

ಶಿಷ್ಟ ಸಂತುಷ್ಟನೆಂದು

ದೃಷ್ಟಾಂತರಹಿತನೆಂದು ತೂಗಿದರು

ಕೃಷ್ಣಾವತಾರ ಹರಿಯ ||೯||


ವೃದ್ದ ನಾರಿಯರೆಲ್ಲರು ಜಗದೊಳಗೆ

ಪ್ರಸಿದ್ದನಿವನೆಂದು ಪೊಗಳಿ

ಬದ್ಧಾನುರಾಗದಿಂದ ತೂಗಿದರು

ಬೌದ್ಧಾವಾತಾರಿಯ ಹರಿಯ ||೧೦||


ತಲತಲಾಂತರದಿಂದ ರಂಜಿಸುವ

ಮಲಯಜ ಲೇಪದಿಂದ

ಜಲಜಗಂಧಿಯರು ಪಾಡಿ ತೂಗಿದರು

ಕಲ್ಕ್ಯಾವತಾರಿಯ ಹರಿಯ ||೧೧||


ಕನಕಮಯ ಖಚಿತವಾದ ತಲ್ಪದಲಿ

ವನಜ ಭವ ಜನಕನಿರಲು

ವನಜ ನಾಭನ್ನ ಪಾಡಿ ತೂಗಿದರು

ವನಿತ ಮಣಿಯರೆಲ್ಲರು ||೧೨||


ಪದ್ಮರಾಗವ ಪೋಲುವ ಹರಿಪಾದ

ಪದ್ಮವನುತ್ತಮ ಹೃದಯ ಪದ್ಮದಲಿ

ನಿಲ್ಲಿಸಿ ಪಾಡಿ ತೂಗಿದರು

ಪದ್ಮನೀ ಭಾಮಿನಿಯರು ||೧೩||


ಹಸ್ತಭೂಷಣವ ಮೆರೆಯಲು

ದಿವ್ಯತಾರ ಹಸ್ತಳಗವಗಳಿಂದ

ಹಸ್ತಗಳ ಪಿಡಿದುಕೊಂಡು ತೂಗಿದರು

ಹಸ್ತಿನೀ ಭಾಮಿನಿಯರು ||೧೪||


ಮತ್ತಗಜಗಾಮಿನಿಯರು ದಿವ್ಯತರ

ಚಿತ್ರ ವಸ್ತ್ರಗಳನುಟ್ಟು ಚಿತ್ತ

ಸಂತೋಷದಿಂದ ತೂಗಿದರು

ಚಿತ್ತಿನಿ ಭಾಮಿನಿಯರು ||೧೫||


ಕಂಕಣ ಧ್ವನಿಗಳಿಂದ ರಂಜಿಸುವ

ಕಿಂಕಿಣೀ ಸ್ವರಗಳಿಂದ

ಪಂಕಜಾಕ್ಷಿಯರು ಪಾಡಿ ತೂಗಿದರು

ಶಂಕಿಣಿ ಭಾಮಿನಿಯರು ||೧೬||


ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ 

ಮಾಕರಿಕಾ ಪತ್ರ ಬರೆದು

ಲಿಕುಚ ಸ್ತನಿಯರು ಪಾಡಿ ತೂಗಿದರು

ಅಕಳಂಕ ಚರಿತ ಹರಿಯ ||೧೭||


ಪಲ್ಲವ ಧಾರೆಯರೆಲ್ಲ ಈ ಶಿಶುವು

ತುಲ್ಯ ವರ್ಜಿತವೆನುತಲಿ

ಸಲ್ಲಲಿತಗಾನದಿಂದ ತೂಗಿದರು

ಕಲ್ಯಾಣಿರಾಗದಿಂದ |೧೮||


ಆನಂದ ಸದನದೊಳಗೆ ಗೋಪಿಯರು

ಆ ನಂದಸುತನ ಕಂಡು

ಆನಂದಭರಿತರಾಗಿ ತೂಗಿದರು

ಆನಂದಭೈರವಿಯಿಂದ ||೧೯||


ದೇವಾದಿದೇವನೆಂದು ಈ ಶಿಶುವು

ಭಾವನಾತೀತನೆಂದು

ದೇವಗಂಧರ್ವರು ಪಾಡಿ ತೂಗಿದರು

ದೇವಗಾಂಧಾರದಿಂದ ||೨೦||


ನೀಲಘನಲೀಲ ಜೋ ಜೋ ಕರುಣಲ

ವಾಲ ಶ್ರೀಕೃಷ್ಣ ಜೋ ಜೋ

ಲೀಲಾವತಾರ ಜೋ ಜೋ ಪರಮಾತ್ಮ

ಬಾಲಗೋಪಾಲ ಜೋ ಜೋ ||೨೧||


ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣ

ಇಂಧು ರವಿನೇತ್ರ ಜೋ ಜೋ

ಇಂಧು ಕುಲಪುತ್ರ ಜೋ ಜೋ

ಪರಮಾತ್ಮ ಇಂದಿರಾರಮಣ ಜೋ ಜೋ Il೨೨||


ತುಂಗ ಭವಭಂಗ ಜೋ ಜೋ

ಪರಮಾತ್ಮ ರಂಗ ಕೃಪಾಂಗ ಜೋ ಜೋ

ಮಂಗಳಾ  ಪಾಂಗ ಜೋ ಜೋ

ಮೋಹನಾಂಗ ರಂಗವಿಠಲನೆ ಜೋ ಜೋ ||೨೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು