ನಂಜುಂಡಾ ನಮ್ಮ ಗುರು ನಂಜುಂಡ - ನಂಜುಂಡ - Nanjunda Namma Guru Nanjunda

|| ಶಿವಸ್ತುತಿ ||

ರಾಗ : ಶಂಕರಾಭರಣ

ತಾಳ : ಅಟತಾಳ






ನಂಜುಂಡಾ ನಮ್ಮ ಗುರು | ನಂಜುಂಡ ||ಪ||

ನಂಜುಂಡಾ ನತಜನಪಾಲ | ಭವ।

ಭಂಜನ ಕರುಣಾಲವಾಲ ಆಹಾ ||

ಆಂಜನೇಯನ ಪ್ರಿಯಾ ಅಂಜಲಿಮುಗಿವೆನು |

ಕಂಜನಾಭನ ಪಾದ ಕಂಜವಿಸೋ ||ಅ.ಪ||



ರಕ್ಕಸಾಂತಕ ದೇವ ಬಿರುದಾ ಕರಿ||

ತೊಕ್ಕನುಟ್ಟಿ ಚಂದ್ರಶಿರದಾ ||ಮುನಿ।।

ಮಾರ್ಕಂಡೇಯರಿಗೆ ಆಯುವರದಾ | ದೇ।।

ವರ್ಕಳೀಗಭೀಷ್ಟೆಯಗರೆದಾ||ಆಹಾ ||

ಹೊಕ್ಕಳೂವಿನ ವಿಷ್ಣುಭಕ್ತಿಯ ಎನಗಿತ್ತು ||

ಚೊಕ್ಕಚಿತ್ತನ ಮಾಡೋ ಮುಕ್ಕಣ್ಣ ಮಹದೇವ||೧||


 ಇಂದ್ರಾದಿ ಸುರಮುನಿ ವಂದ್ಯ ಪಾದ |

ಕೆಂದಾವರೆಯ ಗುಣಸಾಂದ್ರ | ಅಜ- |

ನಂದನ ಸತತ ಆನಂದ ||

ಗುರು ಗಂಧವಾಹನನ ಕಂದಾ || ಆಹಾ |

ವಂದಿಸುವೆನು ಮನ ಮಂದಿರದಲ್ಲಿ ರಾಮ

ಚಂದ್ರನ ನೋಡುವ ಆನಂದ ಭಾಗ್ಯವನೀಯೋ||೨||


ವಿಷಕಂಧರನೆ ವೀತಭಯನೇ | ವರ |

ವೃಷಕೇತು ವೈಷ್ಣವೋತ್ತಮನೆ | ನಮ್ಮ|

ಶಶಿಮುಖ ಗೌರಿನಾಯಕನೆ | ನಿನಗೆ ||

ನಮಿಸುವೆ ಕರುಣಾಳು ಶಿವನೆ || ಆಹಾ ||

ಭಸಿತಭೂಷಿತವಾದ ಶಶಿಸಭಾಂಗನೆ |

ನಸುನಗೆಯ ಮುಖವ ತೋರಿಸೊ ಶಂಕರನೆ ||೩||


ಮನಸಿನ ಚಾಪಲ್ಯ ಬಿಡಿಸೋ | ಮಧ್ವ 

ಮುನಿ ಕೃಪಾ ಕವಚವ ತೊಡಿಸೊ| ಕ್ಷಣ।

ಕ್ಷಣದಲಿ ಹರಿನಾಮ ನುಡಿಸೋ | ದಿವ್ಯ |

ಘನ ವೈರಾಗ್ಯಭಾಗ್ಯ ಉಣಿಸೋ ||ಆಹಾ||

ಕನಸು ಮನಸಿನಲಿ ಹರಿ ರೂಪ ಗುಣ ಕ್ರಿಯೆ |

ನೆನವಿತ್ತು ಸಂತೈಸು ಅಗಜೆಗಾನಂದವೀವನೆ ||೪||


ಮುನಿವೇಷವನು ತಾಳಿ ನೃಪಗೆ | ಶ್ರೀ ವಿಷ್ಣು

ವಿನ ಕಥೆ ಅರುಹಿದ ಸದ್ಗತಿಗೆ | ಮಾರ್ಗ-

ವನೆಮಾಡಿ ಸಲಹಿದೆ ಕೊನೆಗೆ | ಕ।

ರುಣಿಗಳೋಳು ಎಣೆಯಾರೋ ನಿನಗೆ ||ಆಹಾ||

ಗುಣನಿಧಿ ಬಾದರಾಯಣ ವಿಠಲನ ಧ್ಯಾನ |

ನೆನವಿತ್ತು ಸಂತೈಸು ಗಣಪ ಷಣ್ಮುಖರಯ್ಯ ||೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು