||ಶಿವಸ್ತುತಿ ||
ರಚನೆ : ವಿಜಯದಾಸರು
ಜಂಭಾರಿನುತ ಅಭವ ||ಪ||
ಅಂಬರ ಪುರಹರ ಸಾಂಬ ತ್ರಯಂಬಕ
ಶಂಬರಾರಿ ರಿಪು ಗಂಭೀರ ಕರುಣೆ ||ಅ.ಪ.||
ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ ಪಶುಪತಿ
ಫಣಿಪಹಾರ ಪಾವನ್ನಕರ
ತ್ರಿಶೂಲ ಡಮರುಗಧರ
ನೊಸಲನಯನ ವಿಕಸಿತ ಅಂಬುಜಮುಖ
ಶಶಿಧರ ಮೂಕ ರಕ್ಕಸ ಮದ ಮರ್ದನ
ಘಸಣೆಗೊಳಿಸುವ ತಾಮಸವ ಕಳೆದು
ಮಾನಸದಲಿ ರಂಗನ ಬಿಸಜಪಾದವ ತೋರೋ||೧||
ರಜತಪರ್ವತನಿವಾಸ ನಿರ್ಮಲಭಾಸ
ಗಜದೈತ್ಯನಾಶ ಗಿರೀಶ
ಸುಜನರ ಮನೋವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವ್ರಜಮುನಿ ವಂದಿತ ಭಜಿಸುವೆ ನಿನ್ನ ||೨||
ಮಧುರಾಪುರೀ ನಿಲಯ ಮೃತ್ಯುಂಜಯ
ಸದಮಲ ಸುಮನಸ ಗೇಯ
ಸದಾ ನಮಿಪರ ಹೃದಯಸ್ತ ಚಕ್ಕನಾಥ
ಸದೆ ಪಾಪ ಕೊಡು ಅಭಯ
ಸದಾಶಿವ ಜಾಹ್ನವೀಧರ ಕೃತಮಾಲಾ
ನದೀತೀರದಿ ವಾಸವಾಗಿಪ ಸೌಂದರ್ಯ
ಮಧುರಿಪು ವಿಜಯಠ್ಠಲನ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ||೩||
0 ಕಾಮೆಂಟ್‌ಗಳು