ಅದು ಬೆಟ್ಟ ಇದು ಬೆಟ್ಟವೋ ನಂಜುಂಡ - Adu Betta Idu Bettavo Nanjunda

 ಜಾನಪದ ಶೈಲಿ ಶಿವ ಭಜನೆ 



ಅದು ಬೆಟ್ಟ ಇದು ಬೆಟ್ಟವೋ ನಂಜುಂಡ

ನಂದ್ಯಾಲಗಿರಿ ಬೆಟ್ಟವೋ


ನಂದ್ಯಾಲಗಿರಿ ಬೆಟ್ಟಕೆ ನಂಜುಂಡ

ದಾಸ್ವಾಳದ ಗಿಡ ಹುಟ್ಟಿತು


ದಾಸ್ವಾಳದ ಹೂವ ತಂದು ನಂಜುಂಡ

ದಾರ್ಯಾಗ ಪೂಜೆ ಮಾಡಿ


ಹೂ ಬಾಡಿ ಹೋಯಿತಯ್ಯ ನಂಜುಂಡ

ಎದ್ದು ಬಾರಯ್ಯ ಮನೆಗೆ


ಕರನಾಟ ಸೀಮೆದವನೇ ನಂಜುಂಡ

ಕರಪೂರ ವೀಳ್ಯದವನೇ


ನಿನ ಕರುಣೆ ತಪ್ಪಿದ್ಮ್ಯಾಲೆ ನಂಜುಂಡ

ಪರದೇಸಿ ನಾನಾದೆನು


ಪರದೇಸಿ ನಾನಾದೆನು ನಂಜುಂಡ

ಪರಪಂಚ ನನಗ್ಯಾತಕೋ


ಪರಪಂಚ ನನಗ್ಯಾತಕೋ ನಂಜುಂಡ

ನನ ಚಿಂತೆ ನಿನಗ್ಯಾತಕೋ


ಸ್ವಾತಿಯ ಮಳೆ ಹುಯ್ಯಿತೋ ನಂಜುಂಡ

ಸಂಪಂಗಿ ಕೆರೆ ತುಂಬಿತೋ


ಸಂಪಂಗಿ ಕೆರೆಯ ಕೆಳಗೇ ನಂಜುಂಡ

ಕೆಂಬತ್ತಿನೆಲ್ಲ ಬಿತ್ತಿ


ಸಾಲ್ಹಿಡಿದು ಕಬ್ಬ ನೆಟ್ಟು ನಂಜುಂಡ

ಮುಂಭ್ಹಿಡಿದು ನೀರ ಕೊಟ್ಟು


ಜಲ ನೋಡಿ ಬಾವಿ ತೆಗೆಯೋ ನಂಜುಂಡ

ಕುಲ ನೋಡಿ ಹೆಣ್ಣ ತೆಗೆಯೋ


ಮೂಡಲ ಸೀಮೆದವನೇ ನಂಜುಂಡ

ಮುತ್ತಿನ ಹಾರದವನೆ


ಬಡಗಲ ಸೀಮೆದವನೇ ನಂಜುಂಡ

ಬಯಲಾದ ರೂಪದವನೇ


ಸಾಲು ತೆಂಗಿನಮರ ನಂಜುಂಡ

ಮೇಲೆ ನಂಜಾನ ಗುಡಿಯು


ಹದಿನಾಲ್ಕು ಪರದಕ್ಷಿಣಾ ನಂಜುಂಡ

ಹದಿನಾಲ್ಕು ಕಿರುದಕ್ಷಿಣಾ ।। ಅದು ಬೆಟ್ಟ ।।


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು