ಪರಮ ಪುರುಷ ಹರಿ ಗೋವಿಂದ - Parama Purusha Hari Govinda

|| ಹರಿ ಸ್ತುತಿ ||




ಪರಮ ಪುರುಷ ಹರಿ ಗೋವಿಂದ –

ಸಿರಿವರ ನಾರಾಯಣ ಗೋವಿಂದ


ನಿಶೆವೆಸರಸುರನ ಉಸಿರ ತೊಲಗಿಸಿದೆ

ಕುಸುಮ ಶರನ ಪಿತ ಗೋವಿಂದ

ವಸು ಪೂರಿತ ಶ್ರುತಿ ಮಸುಳಿಸದೆ

ತಂದೆ ಬಿಸಜ ಸಂಭವನಯ್ಯ ಗೋವಿಂದ ||1||


ಜತನದಿ ಮಧುಮಥನದಿ ಮಂದರ

ಪರುವತ ಉದ್ಧರಿಸಿದೆ ಗೋವಿಂದ

ಶತ ಕ್ರತುವಿನ ಸಿರಿ ಗತವಾಗದ ಮುನ್ನ

ಕ್ಷಿತಿ ಪೆತ್ತನಯ್ಯ ಗೋವಿಂದ ||2||


ಭೂತಳವೆರಸಿ ರಸಾತಳಕಿಳಿದಿಹ

ಪಾತಕನ ಕಂಡೆ ಗೋವಿಂದ

ಆತನೊಡನೆ ಕಾದಾತನ ಗೆಲಿದು ಮ-

ಹೀತಳವನು ತಂದೆ ಗೋವಿಂದ ||3||


ದುರುಳಾಸುರನ ನಡುಗರುಳ ಮಾಲೆ ಮುಂ-

ಗೊರಳೊಳು ಧರಿಸಿದೆ ಗೋವಿಂದ

ಗರಳ ಕೊರಳನು ಬೆರಳೆತ್ತಿ ಪೊಗಳಲು

ತರಳಗೊಲಿದೆ ನೀ ಗೋವಿಂದ ||4||


ವಾಮನನಾಗಿ ನಿಸ್ಸೀಮ ಬಲಿಯ

ಕೈಯಭೂಮಿಯನಳೆಕೊಂಡೆ ಗೋವಿಂದ

ತಾಮರಸ ಪದದಿ ಕನಕ ಗರ್ಭಯೋಗ

ವ್ಯೋಮ ಗಂಗೆಯ ತಂದೆ ಗೋವಿಂದ ||5||


ಸುರ ಪಶುವಿಗೆ ಋಷಿಯನು ಕೊಂದನ

ಬಹುಕರ ಬಲ ಮುರಿದೆಯೊ ಗೋವಿಂದ

ತರ ಹರಿಸದೆ ವಸುಧೆಯ ಒಡೆತನ

ಭೂಸುರರಿಗೆ ನೀಡಿದೆ ಗೋವಿಂದ ||6||


ತ್ರಿಣಯನ ತಾತ್ಪರ್ಯ ರಾವಣನ

ಶಿರ ರಣದೊಳುರುಳಿಸಿದೆ ಗೋವಿಂದ

ಕ್ಷಣಮೆಣಿಸದೆ ಸದ್ಗುಣವಂತ ವಿಭೀ-

ಷಣಗಭಯವಿತ್ತೆ ಗೋವಿಂದ ||7||


ಮಾರಣ ಕ್ರತು ಸಂಪೂರಣ ಕಂಸ ಸಂ-

ಹಾರಣ ಭುಜಬಲ ಗೋವಿಂದ

ವಾರಣಪುರಪತಿ ಸಿರಿ ಭೂಭಾರೋತ್ತಾರಣ

ಬಲಯುತ ಗೋವಿಂದ ||8||


ಕಥೆಯನು ನಿರ್ಮಿಸಿ ಪತಿವ್ರತೆಯರ

ಘನವ್ರತಗಳ ಕೆಡಿಸಿದೆ ಗೋವಿಂದ

ಜತೆಯಗಲದ ಪುರ ತ್ರಿತಯ ಗೆಲಿದು ದೇ-

ವತೆಗಳ ಸಲಹಿದೆ ಗೋವಿಂದ ||9||


ಜಾಜಿಯ ಮರಕತ ತೇಜಿಯನೇರಿ ವಿ-

ರಾಜಿಪ ರಾವುತ ಗೋವಿಂದ

ಸೂಜಿಯ ಬೆನ್ನೊಳು ರಾಜಿಪ ತೆರದಿ ಸ-

ಹಜರೊಳಡಗಿರ್ಪ ಗೋವಿಂದ ||10||


ಮೇದಿನಿಗೋಸುಗ ಕಾದಿ ಕಲಹದಿ ವಿ-

ರೋಧಿಗಳ ಕೊಂದೆ ಗೋವಿಂದ

ಸಾಧುಗಳಿಗೆ ಸುಖವೀಯುವ ಬಾಡದ

ಶ್ರೀಧರ ಕೇಶವ ಗೋವಿಂದ ||11||


ಭಜನೆಯನ್ನು ಹಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

https://www.facebook.com/groups/1993083294309926/permalink/3136579396626971/


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು