|| ಶ್ರೀ ವೆಂಕಟೇಶ್ವರ ಸ್ತುತಿ ||
ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||pa||
ಶೇಷಗಿರಿಯವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||1||
ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ ||2||
ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ ||3||
0 ಕಾಮೆಂಟ್‌ಗಳು