|| ತತ್ವ ಪದ ||
ನಾನೇ ನಾನಲ್ಲದಿನ್ನೇನೊಂದು ತೋರದು |
ನಾನೆಂಬ ನಿಜವನು ಧ್ಯಾನಿಸಿ ನೋಡೇ |
ಮಾನಮೇಯಗಳೆಂಬಿ |ಕಾಣುವೀ ತ್ರಿಪುಟಿಯ |
ಭಾನ ತೋರದ ಸಚ್ಚಿದಾನಂದ ನಿಧಿಯೊಳು ||
ನಿರವಧಿಕನು ನಾನೇ | ನಿರತಿಶಯನು ನಾನೇ |
ವಿರಚಿಸಿ ಮಾಯೆಯ |ಬೆರೆತವ ನಾನೇ |
ಪರಿಪರಿ ರೂಪವ |ಧರಿಸಿದವನು ನಾನೇ |
ಪರಮನೆನಿಸಿ ಜಗವ |ಪೊರೆಯುವವನು ನಾನೇ ||
ಮಲಿನ ಸತ್ತ್ವವು ನಾನೇ |ಕಲೆತದರೊಳು ನಾನೇ |
ಮಲಿನ ಜೀವನು ಎಂದು |ತಿಳಿದವ ನಾನೇ |
ತಿಳಿಯದೆ ತತ್ತ್ವವ |ಕಳವಳಿಸುವ ನಾನೇ |
ಬಳಸಿ ಜನ್ಮಗಳನೂ |ಬಳಲಿದವನು ನಾನೇ ||
ದೇಹರೂಪನು ನಾನೇ |ದೇಹಿಯಾದವ ನಾನೇ |
ಸೋಹಮೆಂದರಿಯದ |ಮೋಹಿಯು ನಾನೇ |
ಸಾಹಸವನು ತಳೆ |ದೂಹಿಸಿ ತತ್ತ್ವವ |
ಸೋಹಮೆಂದರಿತು |ನಿರ್ಮೋಹಿಯಾದವ ನಾನೇ ||
ನನಸಿನೊಳಗು ನಾನೇ |ಕನಸಿನೊಳಗೂ ನಾನೇ |
ತನಿನಿದ್ರೆಯೊಳು ನಾನೇ |ಕೊನೆಯೊಳು ನಾನೇ |
ಮನೆಧನೋದ್ಯಾನ |ವಾಹನವಸ್ತ್ರಭೂವಾರಿ |
ಕನಕಾದಿ ರೂಪಿನಿಂ |ಜನಿಸಿದವನು ನಾನೇ ||
ಅರುಹು ರೂಪನು ನಾನೇ|ಮರವೆಯಾದವ ನಾನೇ |
ಅರುಹು ಮರವೆಗಳೊಳಿರುವರೂಪನು ನಾನೇ|
ಗುರು ಶಂಕರಾರ್ಯನೋಳು ಬೆರದೇಕಮಯನಾಗಿ |
ಪರಿಪೂರ್ಣ ಭಾವದಿಂದಿರುವ ರೂಪನು ನಾನೇ ||
0 ಕಾಮೆಂಟ್‌ಗಳು