|| ಗೋವಿಂದ ಸ್ತುತಿ ||
ನಂದ ತನಯ ಗೋವಿಂದನ
ಭಜಿಪುದು ಆನಂದವಾದ ಮಿಠಾಯಿ ||ಪ||
ಬಂಧಗಳನು ಭವ ರೋಗಗಳೆಲ್ಲನು
ನಿಂದಿಪುದು ಈ ಮಿಠಾಯಿ ||ಅ.ಪ||
ದಧಿ ಘೃತ ಕ್ಷೀರಂಗಳಿಗಿಂತಲೂ
ಬಹು ಅಧಿಕವಾದ ಮಿಠಾಯಿ
ಕದಳೀ ದ್ರಾಕ್ಷಿ ಖರ್ಜೂರ ರಸಗಳನು
ಮೀರುವುದು ಈ ಮಿಠಾಯಿ ||೧||
ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ
ಮಿಂಚಿದಂಥ ಮಿಠಾಯಿ
ಕಂಚೀಶನೆ ರಕ್ಷಿಸು ಎಂದುಸಿರುವರ
ಅಂಜಿಕೆ ಬಿಡಿಪ ಮಿಠಾಯಿ ||೨||
ಜಪ ತಪ ಸಾಧನಗಳಿಗಿಂತಲೂ
ಬಹು ಅಪರೂಪದ ಮಿಠಾಯಿ
ಜಿಪುಣ ಮತಿಗಳಿಗೆ ಸಧ್ಯವಲ್ಲದಿಹ
ಪುರಂದರ ವಿಠಲ ಮಿಠಾಯಿ ||೩||
0 ಕಾಮೆಂಟ್‌ಗಳು