ಹ್ಯಾಂಗೆ ಮಾಡಲಯ್ಯ ಕೃಷ್ಣ - Hyange Madalayya Krishna

|| ಕೃಷ್ಣ ಸ್ತುತಿ ||





ರಾಗ - ಆರಭಿ

ತಾಳ - ಆದಿತಾಳ


ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ||ಪ||

ಮಂಗಳಾಂಗ ಭವಭಂಗ ಬಿಡಿಸಿ ನಿನ್ನ

ಡಿಂಗರಿನ ಮಾಡೋ ಅಂಗಜ ಜನಕ||ಅ ಪ||


ಏಸು ಜನಮದ ಸುಕೃತದ ಫಲವೊ ತಾನು ಜನಿಸಲಾಗಿ

ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ 

ತೋಷಶಾಸ್ತ್ರಮತ ಚಿನ್ಹಿತನಾಗದೆ ದೋಷಕೆ ಒಳಗಾಗಿ

ಲೇಸು ಸಾಧನವ ಕಾಣದೆ ದುಸ್ಸಹವಾಸದಿಂದಲಿ ದಿನದಿನ ಕಳೆದೆ||೧||


ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ

ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ

ನಿಶಿಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ

ಉಸುರಿದ ನೆಲವೊ ಸರ್ವಕಾಲ ನಿನ್ನೊಡೆತನೆಂಬುವ ಬಗೆಯನು ಅರಿಯದೆ ll 2 ll


ನೆರೆನಂಬಿದ ಪಾವಟಿಕೆಗಳೆಲ್ಲ ಸರಿದು ಪೋದುವಲ್ಲ

ಮರಳಿ ಈ ಪರಿ ಜನುಮವು ಬರುವ ಭರವಸೆಯಂತು ಇಲ್ಲ

ಪರಿಪರಿ ವಿಷಯದ ಆಸೆಯು ಎನಗೆ ಪಿರಿದು ಆಯಿತಲ್ಲ

ಹರಿಯೆ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ll 3 ll


ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ 

ಪವನಾತ್ಮಕ ಗುರು ಮಧ್ವಶಾಸ್ತ್ರದ ಪ್ರವಚನ ಕೇಳಲಿಲ್ಲ

ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ

ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲವಲ್ಲ ll 4 ll


ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ

ರಾಗದಿ ಶುಕಮುನಿ ಪೇಳ್ದ ಹರಿಕಥೆ ಸಂಯೋಗ ಎಂಬುದಿಲ್ಲ

ನೀಗುವಂಥ ಭವಭಯ ಭಕುತಿ ವೈರಾಗ್ಯವೆಂಬೋದಿಲ್ಲ

ಯೋಗಿವಂದ್ಯ ಗೋಪಾಲವಿಠಲ ತಲೆಬಾಗಿ ನಿನ್ನನೆ ಬೇಡಿಕೊಂಬೆ ll 5 ll

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು