ತೂಗಿರೆ ರಂಗನ ತೂಗಿರೆ ಕೃಷ್ಣನ - Tugire Rangana Tugire Krishnana

|| ಶ್ರೀ ಕೃಷ್ಣ ಲಾಲಿ ಹಾಡು ||




ತೂಗಿರೆ ರಂಗನ ತೂಗಿರೆ ಕೃಷ್ಣನ

ತೂಗಿರೆ ಅಚ್ಯುತ ಅನಂತನ


ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ

ತೂಗಿರೆ ಕಾವೇರಿ ರಂಗಯ್ಯನ


ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ

ನಾಗಕನ್ನಿಕೆಯರು ತೂಗಿರೇ

ನಾಗವೇಣಿಯರು ನೇಣು ಪಿಡಿದುಕೊಂಡು

ಬೇಗನೆ ತೊಟ್ಟಿಲ ತೂಗಿರೆ (೧)


ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ

ಇಂದು ಮುಖಿಯರೆಲ್ಲ ತೂಗಿರೆ

ಇಂದ್ರ ಕನ್ನಿಕೆಯರು ಬಂದು 

ಮುಕುಂದನ ತೊಟ್ಟಿಲ ತೂಗಿರೆ (೨)


ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ

ನೀಲ ಕುಂತಳೆಯರು ತೂಗಿರೆ

ವ್ಯಾಳ ಶಯನ ಹರಿ ಮಲಗು ಮಲಗು ಎಂದು

ಬಾಲ ಕೃಷ್ಣಯ್ಯನ ತೂಗಿರೆ (೩)


ಸಾಸಿರ ನಾಮದ ಸರ್ವೋತ್ತಮನೆಂದು

ಸೂಸುತ್ತ ತೊಟ್ಟಿಲ ತೂಗಿರೆ

ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ

ದೋಷ ವಿದೂರನ ತೂಗಿರೆ (೪)


ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ

ತರಳನ ತೊಟ್ಟಿಲ ತೂಗಿರೇ

ಸಿರಿದೇವಿ ರಮಣನ ಪುರಂದರ ವಿಠಲನೆ

ಕರುಣದಿ ಮಲಗೆಂದು ತೂಗಿರೆ (೫)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು