ಸಕಲವೆಲ್ಲವು ಹರಿಸೇವೆಯೆನ್ನಿ - Sakalavellavu Hariseveyenni

 || ಹರಿ ಸ್ತುತಿ ||



ಸಕಲವೆಲ್ಲವು ಹರಿಸೇವೆಯೆನ್ನಿ,

ರುಕುಮಿಣಿಯರಸ ವಿಟ್ಠಲನಲ್ಲದಿಲ್ಲವೆನ್ನಿ.


ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ, 

ನಡೆವುದೆಲ್ಲವು ದೇವರ ಯಾತ್ರೆಯೆನ್ನಿ; 

ಕೊಡುವ ದಾನವು ಕಾಮಜನಕಗರ್ಪಿತವೆನ್ನಿ

ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ.||


ಹೊಸ ವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ,

 ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ;

ಎಸೆವ ಆಭರಣ ಯಶೋದೆನಂದನಿಗೆನ್ನಿ

 ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ.||


ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ,

ಊಟ ಸತ್ಕಾರ ಕಂಜನಾಭನಿಗೆನ್ನಿ;

ನೀಟಾದ ವಸ್ತುಗಳು ಕೈಟಭಾಂತಕಗೆನ್ನಿ

ಕೋಟಲೆ ಸಂಸಾರ ನಾಟಕಧರಗೆನ್ನಿ.||


ನಿದ್ರೆ ಜಾಗರವು ಸಮುದ್ರಶಯನಗೆನ್ನಿ

 ಭದ್ರನಿಧಿ ಗಜವರದಗೆನ್ನಿ,

ರೌದ್ರ ದಾರಿದ್ರ್ಯ ರಾಘವನ ಮಾಯವೆನ್ನಿ

ಶ್ರೀಮುದ್ರೆಗಳ ಧರಿಸಿ ಹರಿದಾಸನೆನ್ನಿ.||


ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿ,

ಎಣಿಸಲಾಗದಅನಂತಮಹಿಮನೆನ್ನಿ; 

ಸೆಣಸುವ ರಕ್ಕಸರ ಶಿರವ ಚೆಂಡಾಡುವ, 

ಪ್ರಣವ ಗೋಚರ ಪುರಂದರವಿಠಲನೆನ್ನಿ.||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು