ಧನು ಮುರಿದ ಶ್ರೀ ರಾಮ - Dhanu Murida Sri Rama

|| ಶ್ರೀರಾಮ ಭಜನೆ ||




ಧನು ಮುರಿದ ಶ್ರೀ ರಾಮ |

ಶೌರ್ಯವನೇ ತಾ ತೋರಿ ||ಪ||

ಜನಕನಾ ಸಭೆಯಲ್ಲಿ ಜಾನಕಿಯ ಮನಸೆಳೆದು||ಅ.ಪ||



ವಸುಧೀಶರೆಲ್ಲರು ಹಸಗೆಟ್ಟು ಕುಳಿತಿರಲು

ದಶಕಂಠ ಧನುವತ್ತಿ ಬಸವಳಿದು ಬಿದ್ದ ||

ಪಸರಿಸಿತು ಹಾಸ್ಯ ಧ್ವನಿ ನೆರೆದ ಸಭೆಯೊಳಗೆಲ್ಲ |

ನಸುನಕ್ಕು ವಿಶ್ವಾಮಿತ್ರ ರಾಮನೆಬ್ಬಿಸಿದ ||೧||


ಶ್ಯಾಮಸುಂದರನೆದ್ದು ಪ್ರೇಮದಿಂದ ಮುನಿಗೆರಿಗಿ |

ಆ ಮಹಾ ಧನುವಿದ್ದ ಸ್ಥಳಕೆ ತಾ ಬಂದ ||

ಕೋಮಲ ಕರಗಳಿಂದ ಧನುವೆತ್ತಿ ತಾ ಪಿಡಿದ |

ಸಾಮರ್ಥ್ಯದಿಂದಳದ ಧನು ಮುರಿದು ಎರಡಾಯ್ತು ||೨||


ಜಯವಾಯ್ತು ರಾಮಗೆಂದು ಜಯಬೇರಿ ಮೊಳಗಲು |

ಜಯ ಜಯ ಜಯವೆಂದು ಸುರರು ಹೂವ ಮಳೆಗೆರೆದು ||

ಜಯಮಾಲೆ ಹಾಕಿದಳು ಜಾನಕಿಯು ಓಡಿ ಬಂದು |

ಜಯ ಪಡೆದು ನಿಂತಿಹ ಪುರಂದರ ವಿಠಲ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು