ಬಾರೆ ಸಖಿ ಪೋಗುವ ರಾಸ - Baare Sakhi Poguva Rasa

|| ಶ್ರೀ ರಾಧಾಕೃಷ್ಣ ಸ್ತುತಿ ||




ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ 

ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ | 

ಕೊಳಲನೂದುವಾ ಕೃಷ್ಣ ಕೊಳಲನೂದುವ ||ಪ||


ಜಾರನೆಂದು ಸಣ್ಣಮಾತನಾಡಿದ್ದಾಯಿತು 

ಜೋರನೆಂದು ಬಹಳ ದೂರು ಮಾಡಿದ್ದಾಯಿತು | 

ಮೂರು ನಿಮಿಷ ಅವನ ಮರೆಯಲಾಗದಾಯಿತು | 

ಬೀರುತಿರುವ ಮೋಹಜಾಲ ಸಡಲದಾಯಿತು | 

|| ಬಾರೆ ಸಖಿ ||


ಯಾವನೀತನೆಂದು ಚಿಂತೆ ಮಾಡಿದ್ದಾಯಿತು

ಗೋವಳನಿವನಲ್ಲವೆಂದು ನಿರ್ಧರಾಯಿತು |

ಯಾವನಾದರೇನು ಇವನ ಕ್ಷಣವು ಕಾಣದೆ | 

ಜೀವನ ಕಳೆಯುವುದೆ ದೊಡ್ಡ ಭಾರವಾಯಿತು | 

||ಬಾರೆ ಸಖಿ॥ 


ಮಂದಹಾಸದಿಂದ ಸಕಲ ಜಗವ ಬೆಳಗುವ

ಚಂದ್ರನು ತಾನಿವನ ನೋಡಿ ಬಹಳ ನಾಚುವ | 

ಸಾಂದ್ರವಾಯಿತಂತರಿಕ್ಷ ಮಧುರ ನಾದದಿ | 

ಮಲಯ ಮಾರುತ ತಾ ತಲೆಯನಾಡುವ ॥ 

|| ಬಾರೆ ಸಖಿ ||


ನಾದದ ಸುಧೆ ಸಾಗರದಲಿ ತೇಲುವಂತಿದೆ 

ಮಾಧವ ತಾ ಸುಧೆಯ ರಸವನೆರಚುವಂತಿದೆ | 

ಬಾಧಿಸುತಿಹ ಭವದ ತಾಪವಡಗಿದಂತಿದೆ | 

ಮಾದರಿಫಲ ರಾಸಕ್ರೀಡೆ ತೋರುವಂತಿದೆ | 

॥ ಬಾರೆ ಸಖಿ॥ 


ಸಕಲ ಲೋಕನಾಥನೀತನೆಂದು ತಿಳಿಯಿತು

ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು | 

ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು|

ಭಕುತಿ ಹರಿದು ಎನ್ನಮನ ಪ್ರಸನ್ನವಾಯಿತು ॥ 

॥ಬಾರೆ ಸಖಿ|| 







 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು