|| ನಾರಾಯಣ ಸ್ತುತಿ ||
ರಚನೆ : ಪುರಂದರದಾಸರು
ನಾರಾಯಣಾಯ ನಮೋ ನಾರಾಯಣಾಯ ನಮೋ
ನಾರಾಯಣಾಯ ನಮೋ ನಾರಾಯಣ ||ಪ||
ಹರಿಕೃಷ್ಣ ಶರಣೆನಲು ಅದು ನಿಮಗೆ ಲೇಸು
ಹರಿಯ ಕೀರ್ತನೆಗಳನು ಜಗದೊಳಗೆ ಸೂಸು
ಹರಿಭಕ್ತಿ ಇಲ್ಲದವರ ಸಂಗಕ್ಕೆ ಹೇಸು
ಹರಿಯ ಮರೆತರೆ ಮುಂದೆ ನರಕವೇ ಹಾಸು ||೧||
ದುರ್ಜನರ ಮನೆಯಲ್ಲಿಹ ಹಾಲ ಸವಿಗಿಂತ
ಸಜ್ಜನರ ಮನೆಯಲ್ಲಿ ನೀರೆ ಲೇಸೆಂದ
ದುರ್ಜನರ ಒಡನಾಟ ಸಂಗದಿಂದ
ನಿರ್ಜೀವಿ ಯಾಗಿರುವ ಕಾಡು ಲೇಸೆಂದ ||೨||
ಇಂದ್ರಿಯಗಳ ಸುಖವ ನೆಚ್ಚದಿರು ಕಂಡ್ಯ
ಇಂದ್ರಾದಿಗಳ ಬವಣೆಯನ್ನು ನೋಡಿಕೊಂಡ್ಯ
ಎಂದೆಂದಿಗಿಲ್ಲಿ ದೇಹವ ಕಳೆವೆ ಕಂಡ್ಯ
ಹಿಂದುಮುಂದಿನ ಗತಿಯ ತಿಳಿಯದವ ಭಂಡ ||೩||
ಎಳೆ ತುಳಸಿ ವನಮಾಲೆ ಧರಿಸಿಕೊಳ್ಳಬೇಕು
ತಿಲಕೋರ್ಧ್ವ ಪುಂಡ್ರಗಳ ಹಚ್ಚಲು ಬೇಕು
ನಳಿನನಾಭನ ಸ್ಮರಣೆಯೊಳು ಮುಳುಗಬೇಕು
ಇಳೆಯೊಳಗೆ ವೈಕುಂಠವನು ಸಾರ ಬೇಕು ||೪||
ಸಿರಿವರನ ಭಕ್ತರನು ಸೇವಿಸಲುಬೇಕು
ಪಿರಿದಾಗಿ ದಾನಧರ್ಮವಾಚರಿಸಬೇಕು
ಧರಣಿ ಪುಣ್ಯಸ್ಥಳವ ಮೆಟ್ಟುತಿರಬೇಕು
ಪುರಂದರವಿಠಲನ ಸತತ ನೆನೆಯಬೇಕು ||೫||
0 ಕಾಮೆಂಟ್‌ಗಳು