||ವೆಂಕಟರಮಣ ಶೋಭಾನೆ ||
ಶೋಭಾನ ಶೋಭಾನವೆ ||ಪ ||
ಶ್ರೀ ಭೂ ಅರಸ ವೆಂಕಟರಾಯಗೆ
ಶೋಭಾನ ಶೋಭಾನವೆ ||ಅ .ಪ ||
ಅಂದು ಕ್ಷೀರಾಂಬುಧಿ ಮಥಿಸಲಾಗಿ
ಇಂದಿರೆ ಹರುಷದಿಂದುದಿಸಿ ಬಂದು
ಕಂದರ್ಪ ಕೋಟಿ ಲಾವಣ್ಯಮೂರುತಿಯಾದ
ಮಂದಾರಮಾಲೆಯ ಹಾಕಿದ ದೇವಗೆ ||೧||
ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದಲೆ ಬರುತಿರಲು
ಸನಕಾದಿವಂದ್ಯನ ಕಂಡು ಸಂತೋಷದಿ
ಜಾನಕಿ ಮಾಲೆಯ ಹಾಕಿದ ರಾಮಗೆ ||೨||
ರುಕುಮನು ಶಿಶುಪಾಲಗನುಜೆಯೀಯುವನೆಂದು
ಸಕಲರಾಯರಲ್ಲಿ ನಿಂದಿರಲಾಗಿ
ಭಕುತವತ್ಸಲನನ್ನು ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ ||೩||
ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು
ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ
ಮತ್ತೆ ಆ ಸೋಳ ಸಾಸಿರ ಕನ್ನಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣನಿಗೆ ||೪||
ಪದುಮದೇಶದಲೊಬ್ಬ ದೇವಾಂಗನೆಯು
ಪದುಮಮುಖಿ ಶ್ರುತಿ ಸ್ಮೃತಿಯು
ಪದುಮನಾಭ ಪುರಂದರವಿಠಲಗೆ
ಪದುಮಾವತಿಪ್ರಿಯ ಶ್ರೀನಿವಾಸಗೆ ||೫||
0 ಕಾಮೆಂಟ್‌ಗಳು