ಶ್ರೀ ಕೃಷ್ಣ ಭಜನೆ
ರಚನೆ : ಶ್ರೀ ಗುರು ಗೋಪಾಲ ವಿಠಲ ದಾಸರು
ರಾಗ : ವಿಜಯನಾಗರಿ
ತಾಳ : ಏಕತಾಳ
ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ?
ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ||ಪ||
ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ||೧||
ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ||೨||
ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||೩||
0 ಕಾಮೆಂಟ್‌ಗಳು