|| ಶ್ರೀರಾಮ ಸ್ತುತಿ ||
ರಾಗ : ದೇಶ್
ಶ್ರೀರಾಮ ಜಯರಾಮ ಜಯ ಜಯ ರಾಮ
ಶ್ರೀರಾಮ ಜಯರಾಮ ಜಯ ಜಯ ರಾಮ 1.
ಸನಕಾದಿಗಳನ್ನು ತಡೆಯಲು ರಾಮ
ಜಯ ವಿಜಯರಿಗೆ ಶಾಪವು ರಾಮ
ಶಾಪ ವಿಮೋಚನೆ ಬೇಡಲು ರಾಮ
ರಾಕ್ಷಸ ಜನ್ಮವ ತಳೆದರು ರಾಮ ||೧||
ಸುರಮುನಿ ತಪವನು ಮಾಡಲು ರಾಮ
ಅಸುರರು ತಡೆಯುತಲಿದ್ದರು ರಾಮ
ಅಮರರು ಮುನಿಗಳ ಬೇಡಲು ರಾಮ
ವಿಷ್ಣುವೆ ರಾಮನು ಎನಿಸಿದ ರಾಮ ||೨||
ಶೇಷನೇ ಲಕ್ಷ್ಮಣ ನಾಗಲು ರಾಮ
ಶಂಖವೆ ಭರತನು ಆದನು ರಾಮ
ಚಕ್ರನೇ ಆ ಶತ್ರುಘನು ರಾಮ
ಲಕ್ಷ್ಮಿಯು ಸೀತೆಯು ಆದಳು ರಾಮ ||೩||
ಕೋಸಲದರಸನು ದಶರಥ ರಾಮ
ಸುತರಿಗೆ ತಪಿಸುತಲಿದ್ದನು ರಾಮ
ವಸಿಷ್ಠರಲ್ಲಿಗೆ ಬಂದರು ರಾಮ
ಸುತ ಕಾಮೇಷ್ಟಿಯ ಬೆಸಸಿದ ರಾಮ ||೪||
ಕೃಪೆಯಿಡೆ ಖಷ್ಯಶೃಂಗರು ರಾಮ
ದಶರಥ ಯಾಗವ ಮಾಡಿದ ರಾಮ
ಅಗ್ನಿಯು ಪಾಯಸವೀಯಲು ರಾಮ
ನೃಪದನು ಸತಿಯರಿಗಿತ್ತನು ರಾಮ ||೫||
ತಾಳುತೆ ಗರ್ಭವ ಕಾಲದಿ ರಾಮ
ಕೌಸಲ್ಯೆ ನಿನ್ನನು ಪಡೆದಳು ರಾಮ
ಕೈಕೆಯಿಗೆ ಭರತನು ಜನಿಸಲು ರಾಮ
ಸುಮಿತ್ರೆಗವಳೀ ಮಕ್ಕಳು ರಾಮ ||೬||
ಅವರೇ ಲಕ್ಷ್ಮಣ ಶತ್ರುಘ್ನು ರಾಮ
ಪುತ್ರರು ಸುಖದಲಿ ಬೆಳೆಯಲು ರಾಮ
ವಿಶ್ವಾಮಿತ್ರರು ಕರೆದರು ರಾಮ
ದಶರಥನೊಲ್ಲದೆ ಚಿಂತಿಸೆ ರಾಮ ||೭||
ರಾಗ : ಭೀಂಪಲಾಸ್
ಗುರುಗಳು ಸಲಹೆಯ ಕಳುಹಿಸೆ ರಾಮ
ತಾಟಕಿಯನು ಸಂಹರಿಸಿದೆ ರಾಮ
ಶಿಲೆಯೊಳು ಪೆಣ್ಣನು ಗೈದೆಯ ರಾಮ
ಕ್ಷತ್ರಿಯ ವಿದ್ಯೆಯ ಕಲಿಯುತ ರಾಮ ||೮||
ಯಾಗಕ್ಕೆ ಭೂಮಿಯ ಉಳುಹಲು ರಾಮ
ನೇಗಿಲ ಕೊನೆಯಲ್ಲಿ ಬಾಲೆಯು ರಾಮ
ಸೀತೆಯು ಎನಿಸುತ ಬೆಳೆದಳು ರಾಮ
ಮದುವೆಯ ಸುದ್ದಿಯು ಬಂದುದೆ ರಾಮ ||೯||
ಶಿವಕೋದಂಡವ ಮುರಿಯುತೆ ರಾಮ
ಸೀತೆಯ ಮಾಲೆಯ ಧರಿಸಿದ ರಾಮ
ಕುವರರ ಲಗ್ನಗಳಾದವು ರಾಮ
ಮಾಂಡವಿ ಭರತನ ಪತ್ನಿಯು ರಾಮ ||೧೦||
ಊರ್ಮಿಳೆ ವಲ್ಲಭ ಲಕ್ಷ್ಮಣ ರಾಮ
ಶೃತ ಕೀರ್ತಿಗೆ ಶತ್ರುಘ್ನನು ರಾಮ
ಸಕಲರು ಅಯೋಧ್ಯೆಯಲಿರುತಿರೆ ರಾಮ
ಭಾರ್ಗವ ಗರ್ವವ ಮುರಿದೆಯ ರಾಮ ||೧೧||
ಸಕಲರು ಸುಖದಲ್ಲಿ ಸೇರಲು ರಾಮ
ಸದ್ಗುಣ ರಾಮಗೆ ಪಟ್ಟವು ರಾಮ
ಸಕಲವು ಸಿದ್ಧತೆ ಮಾಡಲು ರಾಮ
ಮಂಥರೆ ಕೈಕೆಯಿಗೆ ಬೋಧಿಸೆ ರಾಮ ||೧೨||
ವರಗಳನಾಕೆಯು ಕೇಳಲು ರಾಮ
ಭರತನು ನಾಡಿಗೆ ಈಶನು ರಾಮ
ಕೇಳ್ಪುದೆ ನೃಪನಿಗೆ ಮೂರ್ಚೆಯು ರಾಮ
ತಂದೆಯ ನುಡಿಯನು ನಡೆಸಲು ರಾಮ ||೧೩||
ರಾಗ : ವಾಸಂತಿ
ಸಂತೈಸುತ ನೀ ಹೊರಟೆಯ ರಾಮ
ಪತಿವ್ರತೆ ಸೀತೆಯು ಸೇರ್ದಳು ರಾಮ
ಅಣ್ಣನ ಸಂಗಡ ಲಕ್ಷ್ಮಣ ರಾಮ
ಗಂಗಾ ತೀರವ ದಾಟಲು ರಾಮ ||೧೪||
ಗುಹನಿಗೆ ಪ್ರೇಮವ ತೋರಿದ ರಾಮ
ಭರದ್ವಾಜರು ಸತ್ಕರಿಸಲು ರಾಮ
ಚಿತ್ರಕೂಟಾದ್ರಿಯ ಸೇರಲು ರಾಮ
ಅಗಲಿಕೆ ಕಳೆದನು ದಶರಥ ರಾಮ ||೧೫||
ತಾತಗೆ ಕರ್ಮವ ನಡೆಸಿದ ರಾಮ
ಭರತನು ಪಡೆದನು ಪಾದುಕೆ ರಾಮ
ವನದಲಿ ಮುನಿಗಳನೊಲಿಸಿದ ರಾಮ
ಪಂಚವಟಿಯ ನೀ ಸೇರಿದೆ ರಾಮ ||೧೬||
ಶೂರ್ಪನಖಿ ಮುಖಭಂಗವು ರಾಮ
ಖರದೂಷಣ ಸಂಹಾರವು ರಾಮ
ಮಾಯಾಮೃಗವನು ಮೋಹಿಸೆ ರಾಮ
ಮಾರೀಚಾಸುರ ಮಡಿದನು ರಾಮ ||೧೭||
ರಾವಣ ಸೀತೆಯ ಕದ್ದನು ರಾಮ
ತಡೆದ ಜಟಾಯುಗೆ ಸದ್ಗತಿ ರಾಮ
ಕಬಂಧ ಶಬರಿಗೆ ಮುಕ್ತಿಯು ರಾಮ
ಸುಗ್ರೀವ ಸಖ್ಯವು ಆಗಲು ರಾಮ ||೧೮||
ವಾಲಿಯ ಮರ್ಧನವಾಯಿತು ರಾಮ
ಹನುಮನ ಸೇವೆಯನೊಪ್ಪಲು ರಾಮ
ಕೂಡಲೆ ಲಂಕೆಯ ಸೇರಲು ರಾಮ
ಸೀತಾ ವಾರ್ತೆಯ ತಂದುದೆ ರಾಮ ||೧೯||
ಶರಧಿಗೆ ಸೇತುವೆ ಕಟ್ಟಿಸಿ ರಾಮ
ರಾವಣ ರಕ್ಕಸ ನಾಶವು ರಾಮ
ಘಟಕರ್ಣಾದಿಗಳಳಿದರು ರಾಮ
ಭಕ್ತ ವಿಭೀಷಣಗೆ ರಾಜ್ಯವು ರಾಮ ||೨0||
ರಾಗ : ಯಮನ್
ಸೀತೆಯ ನೋಡಲು ಮೋದವು ರಾಮ
ಸಕಲರು ರಾಜ್ಯವಾ ಸೇರಲು ರಾಮ
ರಾಜ್ಯವ ನೀ ಸ್ವೀಕರಿಸಿದೆ ರಾಮ
ಅಮರರು ಹೂವುಳೆಗರೆದರು ರಾಮ ||೨೧||
ಧರೆಯೊಳು ಧರ್ಮವು ಸತ್ಯವು ರಾಮ
ಕಾಲಕ್ಕೆ ಮಳೆ ಬೆಳೆ ನಡೆಸಿದೆ ರಾಮ
ಮಹಾಸಾಮ್ರಾಟನು ಎನಿಸಿದ ರಾಮ
ದೇವರು ಎನ್ನುತ ಭಜಿಪರು ರಾಮ ||೨೨||
ಪ್ರಜೆಯಲಿ ನೀನಿಡೆ ಪ್ರೇಮವು ರಾಮ
ಲೋಕವೆ ಭಕ್ತಿಯ ತೋರಲು ರಾಮ
ಸೀತೆಯು ಗರ್ಭವ ತಾಳಲು ರಾಮ
ಅಗಸನ ನುಡಿಯ ಕಳುಹಿತು ರಾಮ ||೨೩||
ಮುನಿ ವಾಲ್ಮೀಕಿಯು ಒಯ್ಯಲು ರಾಮ
ಕುಶ ಲವರುದಿಸಿದರಲ್ಲಿಯೆ ರಾಮ
ಯಾಗದಿ ಕುದುರೆಯ ಕಳುಹಲು ರಾಮ
ವೇಗದಿ ಪುತ್ರರು ತಡೆಯುತೆ ರಾಮ ||೨೪||
ನರಸಾರ್ಯ ಕೃತ ನಾಮವೇ ರಾಮ
ಭರದಲ್ಲಿ ಧರೆಯೊಳು ಹರಡಿತು ರಾಮ
ರಘುಕುಲ ರತ್ನವು ಎನಿಸಿದೆ ರಾಮ
ಜಯ ಜಯವಾಗಲಿ ಜಾನಕಿ ರಾಮ ||೨೫||
ಆನಂದಾಮೃತ ವರ್ಷಕ ರಾಮ
ಆಶ್ರಿತ ವತ್ಸಲ ಜಯ ಜಯ ರಾಮ
ಸಕಲ ಜೀವ ಸಂರಕ್ಷಕ ರಾಮ
ಆಶ್ರಿತ ವತ್ಸಲ ಜಯ ಜಯ ರಾಮ ||೨೬||
ಸಮಸ್ತ ಲೋಕೋದ್ದಾರಕ ರಾಮ
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ಸೀತಾರಾಮ ಸೀತಾರಾಮ ಸೀತಾರಾಮ ||೨೭||
0 ಕಾಮೆಂಟ್‌ಗಳು