|| ಶ್ರೀರಾಮ ಸ್ತುತಿ ||
ರಚನೆ: ವೇ|ಬ್ರ|ಶ್ರೀ ಅಂಬಳೆ ನರಸಿಂಹ ಭಟ್ಟರು
ರಾಮ ಪೂಜಿಪೆ ನಿಮ್ಮ ಕೋಮಲ ಚರಣವ
ಕಾಮಿತಾರ್ಥವನಿತ್ತು ಸಲಹಬೇಕಯ್ಯ ||ಪ||
ಆ ಮುನಿ ಜನಗಳ ಪೊರೆದ ನಿಮ್ಮಯ ಪ್ರೇಮ
ಪೂರಿತ ನಯನದಿಂದಿೀಕ್ಷಿಸು ನಮ್ಮನು ||ಅ.ಪ||
ಪಾವನ ಮೂರ್ತಿಯ ಧ್ಯಾನವ ಮಾಡುತ್ತ
ಮನದಿ ಆವಾಹಿಸಿ ಪರಮ ಭಕ್ತಿಯಲಿ
ಕನಕ ಮಣಿಮಯ ಪೀಠ ನಿಮಗೆ ತಂದರ್ಪಿಸಿ
ಪಾದ್ಯಾರ್ಘ್ಯ ಆಚಮನ ಸ್ವೀಕರಿಸೆನ್ನುತ ||೧||
ಕ್ಷೀರಬ್ಧಿ ವಾಸಗೆ ಕ್ಷೀರಾದಿಗಳಭಿಷೇಕ
ವಾರಿಧಿ ಶಯನಗೆ ಪರಿಮಳ ಜಲದಿ
ಸ್ನಾನವ ಮಾಡಿಸಿ ವಸ್ತೋಪ ವಸ್ತ್ರವು
ಉಪವೀತ ವಿಮಲ ಗಂಧಾನು ಲೇಪನದಿಂದ ||೨||
ಜಾಜಿ ಮಲ್ಲಿಗೆ ಪಾರಿಜಾತ ಸೇವಂತಿಗೆ
ಶ್ರೀ ತುಳಸಿ ಮೊದಲಾಗಿ ಪೂಜೆಯ ಮಾಡಿ
ದೂಪ-ದೀಪವನಿತ್ತು ಶಾಖ ಪಾಕಂಗಳು
ನಾನಾ ವಿಧ ಫಲ ತಾಂಬೂಲವರ್ಪಿಸಿ ||೩||
ಮಂಗಳ ರೂಪಗೆ ಮಂಗಳಾರತಿ ಎತ್ತಿ
ಮಂತ್ರ ಪುಷ್ಪಗಳಿಂದ ಸ್ತೋತ್ರವ ಮಾಡಿ
ಅಂಗವಷ್ಟಗಳಿಂದ ಸಂದ ಪ್ರದಕ್ಷಿಣೆ
ಇಂದಿರಾ ರಮಣನೇ ನಿಮಗೆ ಮಾಡುವೆನಯ್ಯ ||೪||
ಪರಮ ಸೌಭಾಗ್ಯ ಸಂಪದಗಳ ನೀನಿತ್ತು
ಪರಮ ಪದವಿಯನಿತ್ತು ಸಲಹಬೇಕಯ್ಯ
ಪರಮ ಭಕ್ತಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ
ನರಹರಿ ನಿಮಗೆ ನಾ ಕರವ ಮುಗಿಯುವೆನಯ್ಯ ||೫||

0 ಕಾಮೆಂಟ್‌ಗಳು