ನೀಲ ಘನ ನೀಲ ಜೋ ಜೋ - Neela Ghana Neela Jo Jo

|| ದಶಾವತಾರದ ಲಾಲಿ ಹಾಡು ||

 ರಚನೆ : ಶ್ರೀಪಾದರಾಜರು 




ನೀಲ ಘನ ನೀಲ ಜೋ ಜೋ, 

ಕುರುಣಾಲವಾಲ ಶ್ರೀ ಕೃಷ್ಣ ಜೋ ಜೋ

ಲೀಲಾವತಾರ ಜೋ ಜೋ, 

ಪರಮಾತ್ಮ ಬಾಲ ಗೋಪಾಲ ಜೋ ಜೋ ||


ಇಂದುಧರ ಮಿತ್ರ ಜೋ ಜೋ, 

ಪರಮಾತ್ಮ, ಇಂದುರವಿ ನೇತ್ರ ಜೋ ಜೋ

ಇಂದುಕುಲ ರತ್ನ ಜೋ ಜೋ, 

ಪರಮಾತ್ಮ, ಇಂದಿರಾರಮಣ ಜೋ ಜೋ ||


ಆಶ್ಚರ್ಯ ಜನಕವಾಗಿ, ನಿರ್ಮಿಸಿದ, 

ಪಚ್ಚೆಯಾ ತೊಟ್ಟಿಲಲ್ಲಿ

ಅಚ್ಯುತಾನಂತನಿರಲು, ತೂಗಿದರು, 

ಮತ್ಸ್ಯಾವತಾರ ಹರಿಯ ||


ಧರ್ಮ ಸಂಸ್ಥಾಪನೆಂದು, 

ನಿರವಧಿಕ, ನಿರ್ಮಲಚರಿತನೆಂದು

ವರ್ಮ ಕರ್ಮಗಳ ತಿಳಿದು, ತೂಗಿದರು, 

ಕೂರ್ಮಾವತಾರ ಹರಿಯ ||


ಸರಸಿಜಾಕ್ಷಿಯರು ಎಲ್ಲ, 

ಜನವಶ್ಯಕರ ದಿವ್ಯ ರೂಪನೆಂದು

ಪರಮ ಹರ್ಷದಿ ಪಾಡುತ, 

ತೂಗಿದರು ವರಹಾವತಾರ ಹರಿಯ ||


ಕರಕುಂಭಗಳು ಪೋಲುವ 

ಕುಚದಮೇಲ್ ಹಾರ ಪದಕವು ಹೊಳೆಯಲು

ವರ ವರ್ಣಿನಿಯರು ಕೂಡಿ 

ತೂಗಿದರು, ನರಸಿಂಹ ರೂಪ ಹರಿಯ ||


ಭಾಮಾ ಮಣಿಯರೆಲ್ಲ, 

ಜಗದೊಳಗೆ ಸೋಮನಿವನೆಂದು ಹೊಗಳಿ

ನೇಮದಿಂದಲಿ ಪಾಡುತ 

ತೂಗಿದರು, ವಾಮನ ರೂಪ ಹರಿಯ ||


ಸಾಮಜವರದನೆಂದು ಅತುಳ 

ಭೃಗು ರಾಮಾವತಾರನೆಂದು

ಪ್ರೇಮದಿಂದಲಿ ಪಾಡುತ 

ತೂಗಿದರು, ಭಾರ್ಗವ ರೂಪ ಹರಿಯ ||


ಕಾಮಿನಿಯ ಕಾಮನೆಂದು, 

ಸುರಸಾರ್ವಭೌಮ ಗುಣಧಾಮನೆಂದು

ವಾಮ ನೇತ್ರಿಯರು ಪಾಡಿ 

ತೂಗಿದರು, ರಾಮಾವತಾರ ಹರಿಯ ||


ಸೃಷ್ಟಿಯಾ ಕರ್ತನೆಂದು ಜಗದೊಳಗೆ 

ದುಷ್ಟ ಸಂಹಾರನೆಂದು

ದೃಷ್ಟಾಂತರಹಿತನೆಂದು 

ತೂಗಿದರು, ಕೃಷ್ಣಾವತಾರ ಹರಿಯ ||


ವೃದ್ಧ ನಾರಿಯರು ಯೆಲ್ಲ ಜಗದೊಳ್ 

ಪ್ರಸಿದ್ಧನಿವನೆಂದು ಹೊಗಳಿ

ಬದ್ಧಾನುರಾಗದಿಂದ 

ತೂಗಿದರು, ಬೌದ್ಧಾವತಾರ ಹರಿಯ ||


ಝಣ ಝಣತ್ಕಾರದಿಂದ ರಂಜಿಸುವ 

ಮಲಯಜಾಲೇಪದಿಂದು

ಕುಸುಮ ಗಂಧಿಯರು ಕೂಡಿ 

ತೂಗಿದರು, ಕಲ್ಕ್ಯಾವತಾರ ಹರಿಯ ||


ತುಂಗ ಭವ ಭಂಗ ಜೋ ಜೋ,

ಶ್ರೀ ಕೃಷ್ಣ, ಮಂಗಳಾಪಾಂಗ ಜೋ ಜೋ,

ರಂಗ ಶ್ರೀ ಪಾಂಗ ಜೋ ಜೋ, 

ಪರಮಾತ್ಮ ರಂಗ-ವಿಠ್ಠಲನೆ ಜೋ ಜೋ ||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು