ತುಂಗಾ ತೀರದಿ ಮಂತ್ರಾಲಯದೊಳು - Tunga Teeradi Mantralayadolu

|| ರಾಘವೇಂದ್ರ ಸ್ವಾಮಿ ಸ್ತುತಿ ||




ತುಂಗಾ ತೀರದಿ ಮಂತ್ರಾಲಯದೊಳು 

ನೆಲೆಸಿಹ ಯತಿಗಳ ನೋಡೋಣ||ಪ||

ಮಂಗಳ ಗುಣಗಣ ಸದ್ಗುರುರಾಯರ 

 ದರುಶನ ನಿರತವು ಮಾಡೋಣ||ಅ.ಪ||  


ಮುನ್ನ ಪ್ರಹ್ಲಾದನೆನಿಸುತ ನೃಸಿಂಹನ 

ಕರೆಸಿದ ಮುನಿಗಳ ನಮಿಸೋಣ|

ಮನ್ನಿಸಿ ತಪ್ಪನು ಪಾಪವನಳಿಸುವ 

ಯೋಗಿಯ ಪಾದವ ಹಿಡಿಯೋಣ||೧||

 

ಮೇದಿನೀಪತಿ ಶ್ರೀ ರಾಮನ ಅನುದಿನ 

ಪೂಜಿಪ ರಾಯರ ನೆನೆಯೋಣ|

ಆದರದಿಂದಲಿ ವಿಠಲನ ಭಜಿಸಿದ 

ಮಾಧವ ಪ್ರಿಯನ ಸ್ಮರಿಸೋಣ||೨||


ಪರಿಮಳ ಗ್ರಂಥವ ವಿರಚಿಸಿ ಹರುಷದಿ 

ಬೋಧಿಸಿದವರನು ಜಪಿಸೋಣ|

ತ್ವರಿತದಿ ಕರುಣ ಕಟಾಕ್ಷವ ಬೀರುವ 

ಯತಿಯಲಿ ವರಗಳ ಬೇಡೋಣ||೩||


ದುರಿತಗಳೆಲ್ಲವ ನಾಶವ ಮಾಡುವ 

ಗುರು ರಾಘವರನು ಭಜಿಸೋಣ|

ಧರೆಯೊಳು ಶರಣರ ಪೊರೆಯುವ 

ರಾಯರ ಪೂಜೆಯ ದಿನವೂ ಗೈಯೋಣ||೪||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು