ಶ್ರೀನಿವಾಸ ಕಲ್ಯಾಣ - Srinivasa Kalyana

|| ಶ್ರೀನಿವಾಸ ಕಲ್ಯಾಣ ||

ರಚನೆ : ಪುರಂದರದಾಸರು 




ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು 

ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ।

ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು 

ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ॥೧॥


ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ 

ತಾಳಲಾರದೆ ಸ್ವಾಮಿ ಗುರುಗಳ ಕರೆಸಿ । 

ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು 

ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ ॥೨॥


ಇರುತಿರಲು ಒಂದು ದಿನ ತುರಗವನೆ ಸ್ಮರಿಸುತಲಿ 

ತುರಗ ಬರಲು ಕಂಡು ಮುದದಿ ತಾನೇರಿ ।

ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು 

ಕರುಣಾಸಾಗರ ಒಂದು ವನವ ಕಂಡನು ॥೩॥


ವನದಲ್ಲಿ ವನಜಾಕ್ಷಿ ರಾಜಪುತ್ರಿಯ ಕಂಡು 

ಮನಕೆ ಬಂದಂತಾಡಿ ಕಲಹ ಮಾಡಿದರು ।

ಮನಸಿಜಪಿತ ತಾನು ಅಶ್ವವ ಕಳಕೊಂಡು 

ಘನವಾದ ಗಿರಿ ಏರಿ ಮಲಗಿದ ಹರಿಯು ॥೪॥


ನಗಧರ ಮಲಗಲು ಬಕುಳಾವತಿಯು ಆಗ 

ಬಗೆ ಬಗೆ ಕೇಳಲು ಶೋಕದಿಂ ನುಡಿದ ।

ಗಗನರಾಜನ ಪುತ್ರಿ ಪದ್ಮಾವತಿಯ ಕಂಡು 

ಹಗಲು ಇರಳು ಆಕೆಮುಖವ ಸ್ಮರಿಸುವನು ॥೫॥


ಅವಳಿಗೋಸುಗವಾಗಿ ಇದ್ದಲ್ಲಿಗೆ ಪೋದೆ 

ಅವಳಿಂದ ಎನ್ನಶ್ವ ಹತವಾಯಿತಮ್ಮ ।

ಅವಳ ಹೊರೆತು ಎನ್ನ ಪ್ರಾಣವೇ ನಿಲ್ಲದು 

ಅವಳ ಘಟನೆಯ ನೀನು ಮಾಡಬೇಕಮ್ಮ ॥೬॥


ಅಂದ ಮಾತನು ಕೇಳಿ ಬಕುಳಾವತಿಯು ಆಗ 

ಆನಂದದಿಂ ರಾಜಪುರಕೆ ತೆರಳಿದಳು ।

ಸುಂದರಿಯರ ಕಾರ್ಯ ಸ್ಥಿರವಾಗದೆಂದು 

ಚೆಂದುಳ್ಳ ಸ್ತ್ರೀರೂಪ ಧರಿಸಿದನು ಹರಿಯು ॥೭॥


ಕೊರವಂಜಿ ತಾನಾಗಿ ನೃಪನ ಪುರಕೆ ಹೋಗಿ 

ಧರಣಿದೇವಿಯ ಮುಂದೆ ಶಕುನ ಹೇಳಿದನು ।

ತಿರುಗಿ ಬರಲಾತಗೆ ಮಗಳ ಕೊಡುವೆನೆಂದು 

ಹರಿಗೆ ನಿಶ್ಚಯಮಾಡಿ ಶುಕರ ಕಳಿಸಿದನು ॥೮॥


ತಾಪಸೋತ್ತಮ ಬಂದು ಪತ್ರವನೆ ಕೊಡಲು 

ಶ್ರೀಪತಿಯು ತಾನೋದಿ ಬೆನ್ಹಿಂದೆ ಬರೆದ ।

ಆ ಪರಮವಂದ್ಯ ತಾ ಸುರಸ್ತೋಮವನೆ ಕರೆಸಿ 

ಈ ಪರಿ ವೈಭೋಗ ಮಾಡಿದ ಹರಿಯು ॥೯॥


ಆ ಕ್ಷಣದಲಿ ತಾನು ತರಣಿಯನೆ ಕರೆಸಿ 

ಇಕ್ಷುಚಾಪನ ಮಾತೆ ಬಳಿಗೆ ಪೋಗೆಂದ ।

ತಕ್ಷಣದಲಿ ಸೂರ್ಯ ಹೋಗಿ ನಿಲ್ಲಲು ಹರಿಯ 

ಅಕ್ಷೇಮವನೆ ಕೇಳಿ ತೆರಳಿದಳು ಬೇಗ ॥೧೦॥


ಬಂದ ಸತಿಯಳ ಕೂಡಿ ಮಂದಿರಕೆ ಪೋಗಿ 

ಹಿಂದೆ ಹೇಳಿದ ವಾಕ್ಯ ನಡೆಸೆಂದ ಹರಿಯು ।

ಸಂದೇಹವಿಲ್ಲದೇ ಸ್ವಾಮಿ ನಡೆಸೆಂದು 

ಇಂದಿರಾದೇವಿಯು ನುಡಿದಳು ಹರಿಗೆ ॥೧೧॥


ಸ್ವಸ್ತಿವಾಚನ ಮಾಡಿ ಕುಲದೇವರನ್ನಿಟ್ಟು 

ಪ್ರಸ್ತವ ಮಾಡಿದ ದ್ವಿಜರ ಸ್ತೋಮಕ್ಕೆ ।

ಮರುದಿನ ಲಕ್ಷ್ಮೀಶ ರಾಜನ ಆ ಪುರಕೆ 

ಸುರಸ್ತೋಮವನೆ ಕೂಡಿ ತೆರಳಿ ಬಂದ ॥೧೨ ॥


ಬರುವ ಕೃಷ್ಣನ ಕಂಡು ಶುಕಮುನಿ ಸಂಸ್ತುತಿಸಿ 

ಹರಿಗೆ ಭೋಜನವನ್ನು ಮುದದಿ ಮಾಡಿಸಿದ ।

ಆಕಳಂಕ ಮಹಿಮನು ಬಂದ ವಾರ್ತೆಯ ಕೇಳಿ 

ಸಕಲ ಜನರ ಕೂಡಿ ಕರೆಯೆ ರಾಜ ॥೧೩॥


ಮುದದಿಂದ ಎದುರುಗೊಂಡು ಪರಿಮಳ ಪೂಸಿ 

ಸದಮಲ ಹೃದಯನ ಕರೆತಂದರು ಮನೆಗೆ । 

ಪದ್ಮನಾಭನ ಪೀಠದಲ್ಲಿ ಕುಳ್ಳಿರಿಸಿ 

ಮಧುರ ಮಾತಿಲಿ ತನ್ನ ತರುಣಿ ಒಡಗೂಡಿ ॥೧೪॥


ಹೇಮ ಕುಂಭಗಳಿಂದ ದ್ವಿಜರ ಕೈಯೊಳು 

ಸ್ವಾಮಿಪುಷ್ಕರಣಿ ತೋಯವನೆ ತರಿಸಿ ।

ಹೇಮತಟ್ಟೆಯಲ್ಲಿ ಸ್ವಾಮಿ ಪಾದವನ್ನಿಟ್ಟು 

ಪ್ರೇಮದಿಂದಭಿಷೇಕ ಮಾಡಿದನು ರಾಜ ॥೧೫॥


ಚಿನ್ನದ ಕಿರೀಟ ಆಭರಣವನ್ನಿಟ್ಟು 

ಕನ್ಯಾದಾನವ ಮಾಡಿ ಧನ್ಯನಾದ ।

ತನ್ನ ಮಗಳನೆ ಶ್ರೀನಿವಾಸಗೆ ಒಪ್ಪಿಸಿ 

ಉನ್ನತ ಪದವಿಯ ಚೆನ್ನಾಗಿ ಪಡೆದ ॥೧೬॥


ಮಾವನಪ್ಪಣೆಗೊಂಡು ಮೈದಗೊಸ್ತ್ರವ ಕೊಟ್ಟು 

ಭಾವಶುದ್ದದಿ ತನ್ನ ಮಾವಗೊಂದಿಸಿದ ।

ಯಾವಾಗ ಕರೆದರೂ ಬರುವೆನು ನಾನೆಂದು 

ಪಾವನ್ನ ಮಾಡೆಂದು ಧರಣೀಗೊಂದಿಸಿದ ॥೧೭॥


ಅಷ್ಟಗೋಪುರ ಏರಿ ಕಣ್ಣಿಟ್ಟು ನೋಡುತಲಿ 

ಎಷ್ಟು ಹೇಳುವುದೀಕೆ ಸುಕೃತಫಲವೆನಲು ।

ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ 

ಸುಜನರಂದಣವೇರಿ ಪುರಕೆ ಸಾಗಿದರು ॥೧೮॥


ಆರು ತಿಂಗಳು ಮೀರಿ ಗಿರಿಗೆ ಪೋಗುವೆನೆಂದು 

ಧೀರ ತಾ ನಿಂತಾನೆ ಕುಂಭಜರಾಶ್ರಮದಿ ।

ಧರೆಯೊಳು ಅಣಕೇರಿ ಸುರಪತಿ ಪ್ರಿಯನಾದ 

ಸುಗುಣವೇಂಕಟರನ್ನ ಪುರಂದರವಿಠಲ ॥೧೯॥




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು