|| ಭಕ್ತಿ ವೈರಾಗ್ಯ ಪ್ರಕರಣ ||
ಯಾವ ಕರ್ಮವೋ ಶಿವಶಿವ। ದ್ಯಾವ ಕರ್ಮವೋ!
ಭಾವಕೆ ಸಿಲುಕದ ಭವ್ಯ ಚಿದಾತ್ಮನ।
ಭಾವಿಸಿ ಬಂಧವ ಬಾವಿಲಿ ಮುಳುಗುವು|
ದ್ಯಾವ ಕರ್ಮವೋ ॥ಪಲ್ಲವಿ||
ಮೂರು ಗುಣಂಗಳ | ಮೀರಿದ ಶಿವನೊಳು।
ಸೇರದೆ ಮಡಿಯೆಂದು ಹಾರುತ ತಿರುಗುವ ||
ಅಂಡವಿದನು ಪಿಂಡಾಂಡದೊಳರಿಯದೆ।
ಚಂಡಿಸುತೀ ಮಲ। ಭಾಂಡವ ತೊಳೆಯುವ ||೨||
ಈಶನೊಳಿಲ್ಲದ। ಪಾಶವ ಕಲ್ಪಿಸಿ |
ದೋಷಿಯನುತ ಉಪ। ವಾಸದಿ ಬಳಲುವ ||೩||
ಒಡಲಿನ ತೊಡಕನು। ಬಿಡಿಸುವ ಗುರುವರ।
ನಡಿಗಳ ಪಿಡಿಯದೆ | ಮಡಿ ಮಡಿ ಎಂಬುವ ||೪||
ಸಾಕ್ಷಿ ಎನಿಸುತೀ ಕುಕ್ಷಿಯೊಳಡಗಿಹ |
ವಿರೂಪಾಕ್ಷನ ಕಾಣದೆ। ಅಕ್ಷತೆ ಎರಚುವ ||೫||
ತಿಳಿಯದೆ ತತ್ತ್ವವ। ಕಳೆಯದೆ ಮೋಹವ
ಸುಳಿಯದೆ ಸುಖದೊಳು|ಚಳಿಯೊಳು ಮುಳುಗುವ||೬||
ಪುರದೊಳು ನೆಲಸಿದ। ಪುರುಷನ ಶೋಧಿಸಿ |
ಹರಿಸದೆ ಜನವ ಮರವನು ಸುತ್ತುವ||೭||
ಎಂದಿಗು ತೊಲಗದೆ। ಬಂದಿರುವೀ ಭವ |
ಬಂಧನವಳಿಯದೆ ವಂದನೆ ಮಾಡುವ||೮||
ಗಾತ್ರದೊಳಿಹ ನಿಜ। ಸೂತ್ರವ ಕಾಣದೆ।
ಪಾತ್ರೆಯ ತೊಳೆಯುತ|ಮೂತ್ರದೊಳುರುಳುವ||೯||
ಸೋಹಂ ಭಾವದೊಳೂಹೆಗೆ ಸಿಲುಕದೆ |
ಮೋಹವ ಹರಿಸದೆ|ದೇಹವ ಬಾಧಿಪ ||೧೦||
ಕರಣದ ಧರ್ಮದಿ|ಬೆರತು ಮರತು ತನ್ನ।
ನರಕ ನಾಕಗಳಿಗೆ|ತಿರುಗುತ ಬಳಲುವ||೧೧||
ಕಲಿಸಿ ಜಾತಿಯ ಜಲ್ಪಿಸಿ ಭೇದವ|ನಲ್ಪನು ಎನಿಸಿ|
ವಿಕಲ್ಪದಿ ಕೂಡುವ ||೧೨||
ನಿತ್ಯ ಚಿದಾತ್ಮನ। ತತ್ತ್ವವನರಿತು ಮ।
ಹತ್ವವ ಪಡೆಯದೆ | ಮೃತಿಕೆಗೆರಗುವ ||೧೩||
ಕೂಡದೆ ಗುರುವನು। ನೋಡದೆ ನಿಜವನು।
ನಾಡಿನ ಶಿಲೆಗಳ। ಬೇಡುತ ತಿರುಗುವ ||೧೪ ||
ಕರ್ಮದಿ ಬೆರೆಯದ। ನಿರ್ಮಲ ತಾನೆಂಬ|
ಮರ್ಮವನರಿಯದೆ|ಚರ್ಮವ ತೊಳೆಯುವ||೧೫||
ಚಿನುಮಯ ಶಿವ ತನ್ನ|ನೆನೆಯುವ ಮನುಜರ।
ಮನದೊಳು ನೆಲಸಿರೆ|ವನದೊಳು ತಪಿಸುವ||೧೬||
ಸ್ಥಿರದೊಳು ಬೆರೆಯದೆ|ಗುರುಶಂಕರನೊಳು|
ಸೆರೆಯೊಳು ಸಿಲುಕುವ ||ಯಾವ ಕರ್ಮವೊ॥೧೭
0 ಕಾಮೆಂಟ್‌ಗಳು