|| ಭಕ್ತಿ ವೈರಾಗ್ಯ ಪ್ರಕರಣ ||
kannadabhajanlyrics.blogspot.com |
ಬಿಡು ಬಿಡು ರಾಜಸ ಪೂಜೆಯನು।
ಮೊದಲೊಡಲಬಭಿಮಾನವ ತೊರೆ ನೀನು |
ಮಡದಿಯ ಕಾಣದೆ ಮಿಡುಕುತ ಮನದಲಿ |
ಮೃಡನಡಿ ಪೂಜಿಸಿ ಫಲವೇನು ॥ಪಲ್ಲವಿ||
ಹರನೊಳು ಚಿತ್ತವನಿಡಲಿಲ್ಲಾ |
ಶಿವಶರಣರಿ ಗರ್ಥವ ಕೊಡಲಿಲ್ಲಾ |
ಮರಣದ ಭೀತಿಗೆ ಶಿವಪೊರೆಯೆಂದರೆ।
ನರಕದ ಯಾತನೆ ಬಿಡದಲ್ಲಾ ||೧ ||
ಆಗಮ ಧರ್ಮಂಗಳ ತೊರೆದು।
ಸತಿಭೋಗದಿ ಸ್ಮೃತಿಯಿಲ್ಲದೆ ಮರೆದು|
ರೋಗವು ಬಂದರೆ ಹರ ಪೊರೆಯೆನಲಾ।
ರೋಗವು ನಿನ್ನ ಕೊಲ್ಲದೆ ಬಿಡದೂ ||೨||
ದೃಢತರ ಶಿವಭಕ್ತಿಯ ಬಿಟ್ಟು
ನಿಜ ಮಡದಿಯ ಮೋಹಕೆ ಒಳಪಟ್ಟು |
ಸಡಗರದೊಳಗಿರೆ। ದೂತರು
ಬರಲವರೊಡ ನೋಡುವೆ ಎಲ್ಲವ ಬಿಟ್ಟು ||೩||
ತರುಣಿಗೆ ಮುತ್ತಿನ ಮಾಲೆಗಳೂ।
ಪುರಹರನಿಗೆ ಹತ್ತಿಯ ಜೂಲುಗಳೂ
ಸರಿಸರಿ ನೀ ಮಾಡುವ ಈ ಭಕ್ತಿಗೆ |
ಹುರಿವರು ನಿನ್ನೆಮನಾಳುಗಳೂ ||೪||
ಸಿರಿಯೊಳು ಶಿವನಾಮವ ತೊರೆದೂ।
ಅತಿ ಹರುಷದಿ ಕಣ್ಕಾಣದೆ ಮೆರೆದು |
ಬರ ಬಂದರೆ ಶಿವ ಪೊರೆ ಎಂದರೆ |
ನಿನ್ನನ್ನು ನರಕದೊಳಿರಿಸುವ ಮುರಿದೂ ||೫||
ಹರನೊಳು ಚಿತ್ತವನಿಡಲಿಲ್ಲಾ |
ಶಿವ ಶರಣರ ಸೇವೆಯು ಹಿತವಿಲ್ಲಾ
ತರಳರ ಪೊರೆಯೋ ಶಿವನೀನೆಂದರೆ।
ಪುರಹರ ಕೇಳ್ ನಿನ್ನಾಳಲ್ಲಾ ||೬||
ದಾಸರಿಗನ್ನವನಿಡಲಿಲ್ಲಾ |
ಪರದೂಷಣಗಳ ನೀ ಬಿಡಲಿಲ್ಲಾ।
ಕಾಸನು ತೋರಿಸಿ ಶಿವನೇ ಪೊರೆಯನಲಾ
ಶಿವನಿಗೆ ಬಡತನವಿಲ್ಲಾ ||೭||
ಪಾಪದ ಕೃತ್ಯವು ಕೆಡಲಿಲ್ಲಾ।
ಪರಿತಾಪವ ಗೈವುದು ಬಿಡದಲ್ಲಾ
ದೀಪವ ಹಚ್ಚಿಸಿ ಶಿವನೇ
ಪೊರೆಯನಲಾ ಪರಮಗೆ ಕತ್ತಲೆಯಿಲ್ಲಾ || ೮ ||
ಸಿರಿಬರಗಳ ಸಮನಾಗಿಲ್ಲಾ |
ಈ ಶರೀರ ಭ್ರಾಂತಿಯು ಬಿಡಲಿಲ್ಲಾ
ಬರಿದೇ ದುಃಖವು ಹರಿಯಲಿ ಎಂದರೆ |
ಗುರುಶಂಕರ ನಿನ್ನೊಶನಲ್ಲಾ ॥ಬಿಡು॥ ೯
0 ಕಾಮೆಂಟ್‌ಗಳು