|| ಜಾನಪದ ಶೈಲಿ ಭಜನೆ ||
ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು ಸಕ್ಕರೆ
ನೀ ಕೇಳಿದಾಗ ಕೊಡುವೇನು||
ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ| ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||
ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ|ಕಣ್ಣೋಟ
ಶಿವನ ಕೈಯಲಗು ಹೊಳೆದಂತೆ||
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ|ಕಂದನಂತ
ಮಕ್ಕಳಿರಲವ್ವ ಮನೆತುಂಬ||
ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು|ಕಂದಂಗೆ
ಜೋಗೂಳದಾಗೆ ಅತಿಮುದ್ದು||
ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಎತ್ತಿಕೊಳ್ಳೆಂಬ ಹಟವಿಲ್ಲ|ನಿನ್ನಂತ
ಹತ್ತು ಮಕ್ಕಳೂ ಇರಬಹುದು||
0 ಕಾಮೆಂಟ್‌ಗಳು