ಜೈ ಜೈ ರಾಮ್ ಹರೇ - Jai Jai Ram Hare

|| ರಾಮಕೃಷ್ಣ ಭಜನೆ ||




ಜೈ ಜೈ ರಾಮ್ ಹರೇ

ಜೈ ಜೈ ಕೃಷ್ಣಾ ಹರೇ||ಜೈ ಜೈ ರಾಮ್||

ರಾಮ್ ಹರೇ ಹರೇ ರಾಮ್ ಹರೇ ||2||

ಕೃಷ್ಣಾ ಹರೇ ಹರೇ ಕೃಷ್ಣ ಹರೇ||2||

                          ||ಜೈ ಜೈ ರಾಮ್||


ಕೌಶಲ್ಯಜವರ ವಂಶೋಧ್ಭವ ಸುರ

ಸಂಸೇವಿತ ಪದ ರಾಮ ಹರೇ

ಕಂಸಾದ್ಯಸುರರ ಧ್ವಂಸಗೈದ

ಯದುವಂಶೋಧ್ಭವ ಶ್ರೀ ಕೃಷ್ಣಾ ಹರೇ

                          ||ಜೈ ಜೈ ರಾಮ್||


ಮುನಿಮಖ ರಕ್ಷಕ ಧನುಜರ ಶಿಕ್ಷಕ

ಫಣಿಧರ ಸನ್ನುತ ರಾಮ ಹರೇ

ಘನವರ್ಣಾಂಗ ಸುಮನಸರೊಡೆಯ

ಶ್ರೀವನಜಾಸನ ಪಿತ ಕೃಷ್ಣಾ ಹರೇ

                         ||ಜೈ ಜೈ ರಾಮ್||


ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ

ಸುಲಲಿತ ಗುಣನಿಧಿ ರಾಮ ಹರೇ

ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ

ಚೆಲುವೆಯ ಮಾಡಿದ ಕೃಷ್ಣಾ ಹರೇ

                         ||ಜೈ ಜೈ ರಾಮ್||


ಹರಧನು ಭಂಗಿಸೆ ಹರುಷದಿ ಜಾನಕಿ

ಕರವ ಪಿಡಿದ ಶ್ರೀ ರಾಮ ಹರೇ

ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ

ಶರಣರ ಪಾಲಕ ಕೃಷ್ಣಾ ಹರೇ

                        ||ಜೈ ಜೈ ರಾಮ್ ||


ಜನಕ ಪೇಳೆ ಲಕ್ಷ್ಮಣಸೀತಾ ಸಹ

ವನಕೆ ತೆರಳಿದ ರಾಮ್ ಹರೇ

ವನಕೆ ಪೋಗಿ ತನ್ನರುಹರೊಡನೆ

ಗೋವನು ಪಾಲಿಪ ಶ್ರೀ ಕೃಷ್ಣಾ ಹರೇ

                       ||ಜೈ ಜೈ ರಾಮ್||


ತಾಟಕಿ ಖರಮಧು ಕೈಟಾಭಾರಿ

ಪಾಪಾಟವಿ ಸುರಮುಖ ರಾಮ ಹರೇ

ಆಟದಿ ಫಣಿಮೇಲ್ ನಾಟ್ಯವನಾಡಿದ

ಖೇಟವಾಹ ಶ್ರೀ ಕೃಷ್ಣಾ ಹರೇ

                      || ಜೈ ಜೈ ರಾಮ್||


ಚದುರೆ ಶಬರಿ ಇತ್ತ ಬದರಿಯ ಫಲವನು

ಮುದದಿ ಸೇವಿಸಿದ ರಾಮ ಹರೇ

ವಿದುರನ ಕ್ಷೀರಕೆ ಒದಗಿ ಪೋದ

ಶ್ರೀ ಪದುಮನಾಭ ಜಯ ಕೃಷ್ಣಾ ಹರೇ

                      ||ಜೈ ಜೈ ರಾಮ್||


ಸೇವಿತ ಹನುಮ ಸುಗ್ರೀವನಸಖ

ಜಗತ್ಪಾವನ ಪರತರ ರಾಮ್ ಹರೇ

ದೇವಕಿ ವಸುದೇವರ ಸೆರೆಬಿಡಿಸಿದ

ದೇವದೇವಾ ಶ್ರೀ ಕೃಷ್ಣಾ ಹರೇ

                     ||ಜೈ ಜೈ ರಾಮ್||


ಗಿರಿಗಳಿಂದ ವರ ಶರಧಿ ಬಂಧಿಸಿದ

ಪರಮ ಸಮರ್ಥ ಶ್ರೀ ರಾಮ ಹರೇ

ಗಿರಿಯ ತನ್ನ ಕಿರಿಬೆರಳಲೆತ್ತಿ

ಗೋವಳರ ಕಾಯ್ದ ಶ್ರೀ ಕೃಷ್ಣಾ ಹರೇ

                     ||ಜೈ ಜೈ ರಾಮ್||


ಖಂಡಿಸಿ ದಶಶಿರ ಚೆಂಡಾಡಿದ

ಕೋದಂಡಪಾಣಿ ಶ್ರೀ ರಾಮ ಹರೇ

ಪಾಂಡುತನಯರಿಂದ ಚಂಡ ಕೌರವರ

ದಿಂಡು ಗೆಡಹಿಸಿದ ಕೃಷ್ಣಾ ಹರೇ

                      ||ಜೈ ಜೈ ರಾಮ್||


ತವಕದಿ ಆಯೋಧ್ಯ ಪುರಕೈದಿದ

ತನ್ನ ಯುವತಿಯೊಡನೆ ಶ್ರೀ ರಾಮ ಹರೇ

ರವಿಸುತ ತನಯಗೆ ತನ್ನ ಪಟ್ಟ ಕಟ್ಟಿದ

ಭವತಾರಕ ಶ್ರೀ ಕೃಷ್ಣಾ ಹರೇ

                      ||ಜೈ ಜೈ ರಾಮ್ ಹರೇ||


ಭರತನು ಪ್ರಾರ್ಥಿಸಲರಸತ್ವವ

ಸ್ವೀಕರಿಸಿದ ತ್ವರದಲಿ ರಾಮ ಹರೇ

ವರ ಧರ್ಮಾದ್ಯರ ಧರೆಯೊಲು ಮೆರೆಸಿದ

ಪರಮ ಕ್ರಪಾಕರ ಕೃಷ್ಣಾ ಹರೇ

                    ||ಜೈ ಜೈ ರಾಮ್ ಹರೇ||


ಧರೆಯೊಳಜ್ಞಜನರನು ಮೋಹಿಪುದಕೆ

ಹರನ ಪೂಜಿಸಿದ ರಾಮ ಹರೇ

ಹರನ ಪ್ರಾರ್ಥಿಸಿ ವರವನು ಪಡೆದ

ಚರಿತೆ ಆಗಾಧವು ಕೃಷ್ಣಾ ಹರೇ

                   ||ಜೈ ಜೈ ರಾಮ್ ಹರೇ||


ಅತುಳ ಮಹಿಮ ಸದ್ಯತಿಗಳ ಹ್ರದಯದಿ

ಸತತ ವಿರಾಜಿಪ ರಾಮ್ ಹರೇ

ಸಿತವಾಹನ ಸಾರಥಿ ಎನಿಸಿದ

ಸುರತತಿ ಪೂಜಿತಪದ ಕೃಷ್ಣಾ ಹರೇ 

                   ||ಜೈ ಜೈ ರಾಮ್ ಹರೇ||


ರಾಮ ರಾಮ ಎಂದು ನೇಮದಿ ಭಜಿಪರ

ಕಾಮಿತ ಫಲದ ಶ್ರೀ ರಾಮ ಹರೇ

ಪ್ರೇಮದಿ ಭಕ್ತರ ಪಾಲಿಪ 

ಶ್ರೀ ವರದೇಶವಿಠ್ಠಲ ಶ್ರೀ ಕೃಷ್ಣಾ ಹರೇ

                     ||ಜೈ ಜೈ ರಾಮ್ ಹರೇ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು