ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ - Akka Kele Ninna Thapaswiyarolagobba

|| ಶಿವ ಸ್ತುತಿ ||


ರಚನೆ : ಶ್ರೀ ಗುರುಮಹಿಪತಿ ದಾಸರು




ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ

ಮುಕ್ಕಣ್ಣಗೀವರಂತೆ |ಮುಕ್ಕಣ್ಣಗೀವರಂತೆ || ಪ ||

ಮೂರ್ಖನೊ ಗಿರಿರಾಜ ವಿಗಡ ಮುನಿ |

ಮಾತನೆ ಲೆಕ್ಕಿಸಿ ಮದುವೆ ಮಾಡಿಕೊಡುವನಂತೆ ಅ.ಪ.


ತಲೆ ಎಲ್ಲ ಜಡೆಯಂತೆ|ಅದರೊಳಗೆ ಜಲವಂತೆ |

ತಿಲಕ ಫಣೆಗೆ ಬಾಲಚಂದ್ರನಂತೆ |

ಹೊಳೆವ ಕಿಡಿಗಣ್ಣಂತೆ|ನಂಜು ಗೊರಳನಂತೆ |

ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ || 1 ||


ಉರಗ ಭೂಷಣನಂತೆ|ಭಸ್ಮ ಲೇಪನನಂತೆ |

ಕರಿಯ ಚರ್ಮಾಂಬರ ಉಡುಗೆಯಂತೆ |

ತಿರಿದು ಉಂಬುವನಂತೆ|ಬಿಳಿಯ ಮೈಯವನಂತೆ |

ನಿರುತ ಡಮರುವ ಬಾರಿಸುವ ಜೋಗಿಯಂತೆ||2||


ಹಡೆದವಳಿಲ್ಲವಂತೆ|ಎತ್ತನೇರುವನಂತೆ |

ಅಡವಿ ಗಿರಿಗಳಲಿ ಇಪ್ಪನಂತೆ |

ಒಡನೆ ಪುಲಿದೊಗಲ ಹಾಸಿಗೆ ಇಹುದಂತೆ |

ನುಡಿಗೊಮ್ಮೆ ರಾಮನೆಂಬೋ ಸ್ಮರಣೆಯಂತೆ || 3 ||


ಮಾರನ ರಿಪುವಂತೆ ಐದು ಮೋರೆಗಳಂತೆ |

ಆರೂ ಇಲ್ಲದ ಪರದೇಶಿಯಂತೆ|

ಧಾರುಣಿಯೊಳು ಗುರು ಮಹಿಪತಿಸುತಪ್ರಭೋ |

ಭವ ತಾರಕ ಶಿವನೆಂದು ಮೊರೆ ಹೋಗಬೇಕಂತೆ||4||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು