ಎತ್ತಿರೇ ನವರತ್ನದಾರುತಿ - Ettire Navarathnadaruthi

|| ಲಕ್ಷ್ಮಿ ಆರತಿ ಹಾಡು ||





ಎತ್ತಿರೇ ನವರತ್ನದಾರುತಿ 

ಕರ್ತೃರಂಗನ ರಾಣಿಗೆ||ಪ||

ಉತ್ತಮೋತ್ತಮಲೋಲನಾದ 

ವಿಷ್ಣುವಿನ ಕಲ್ಯಾಣಿಗೆ||ಅ.ಪ||


ಶುದ್ಧ ಸ್ನಾನವ ಮಾಡಿ ನದಿಯಲಿ 

ವಜ್ರಪೀಠದಿ ಕುಳಿಸಿರೇ|

ತಿದ್ದಿ ತಿಲಕವ ತೀಡಿದಂಥ 

ಮುದ್ದು ಮಂಗಳಗೌರಿಗೆ||1||


ಎರೆದು ಪೀತಾಂಬರವನುಡಿಸಿ 

ಸರ್ವಾಭರಣವತೊಡಿಸಿರೇ|

ಹರಳಿನೋಲೆ ಮೂಗುತಿ ಇಟ್ಟ 

ಮುದ್ದು ಮಹಾಲಕ್ಷ್ಮೀ ದೇವಿಗೆ||2||


ಅಚ್ಚಮಲ್ಲಿಗೆ ಲಕ್ಷ ಸಂಪಿಗೆ 

ಎತ್ತಿರೇ ನಿಮ್ಮ ಪಾದಕೆ|

ಉತ್ತಮೋತ್ತಮ ಲೋಲನಾದ 

ವಿಷ್ಣುವಿನ ಕಲ್ಯಾಣಿಗೆ||3||


ಹರಿಯ ವಂಚಿಸಿ ಕರವೀರದೊಳು 

ಭರದಿ ಸ್ಥಿರವಾಗಿರುವೊಳೇ|

ಪರಮಭಕ್ತರಿಗೆ ವರವ ಕೊಡುವ 

ನಿಗರ್ವಿಗೊಲಿಯುವ ದೇವಿಗೆ||4||


ಹುಟ್ಟು ಬಡವಿಯ ಕಷ್ಟ ಕಳೆದು 

ಕೊಟ್ಟಳರಸನ ಸಿರಿಯನು|

ಹೆತ್ತಕುವರನ ತೋರಿದಂಥ 

ಶುಕ್ರವಾರದ ಗೌರಿಗೆ||5||


ನಿಗಮವೇದ್ಯಳೇ ನಿನ್ನ ಮಹಿಮೆಯ 

ಬಗೆಬಗೆಯಿಂದಲಿ ಪೊಗಳುವೆ|

ತೆರೆದು ಭಾಗ್ಯವ ನೀಡುವಂಥ 

ಭೀಮೇಶಕೃಷ್ಣನ ಮಡದಿಗೆ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು