ಗೊಲ್ಲ ಬಾಲರೊಡನೆ ಕೂಡಿ - Golla Bālaroḍane Kūḍi

 || ಶ್ರೀಕೃಷ್ಣ ಸ್ತುತಿ ||



ಗೊಲ್ಲ ಬಾಲರೊಡನೆ ಕೂಡಿ

ಗೊಲ್ಲತಿಯರ ಮನೆಯೊಳಂದು

ನಿಲ್ಲದೋಡಿ ಬೆಣ್ಣೆ ಕದ್ದು ಚೋರನಾದೆಯಾ|

ಮಲ್ಲವೀರರೊಡನೆ ಸೆಣಸಿ

ಖುಲ್ಲ ಕಂಸನನ್ನು ಮಡುಹಿ

ಪುಲ್ಲನಾಭ ಹರಿಯೆ ಜಗಕೆ ನಾಥನಾದೆಯಾ||


ಅಣ್ಣ ರಾಮನೊಡನೆ ಸೇರಿ

ಬಣ್ಣ ಬಣ್ಣ ವೇಷ ಹಾಕಿ

ಹೆಣ್ಣ ಸೀರೆ ಕದ್ದ ಕೃಷ್ಣ ಕಳ್ಳನಾದೆಯಾ|

ಮಣ್ಣ ಮೆದ್ದುದನ್ನು ಕಂಡು

ಚಿಣ್ಣ ನಿನ್ನ ಗೋಪಿ ಹೊಡೆಯೆ

ಸಣ್ಣ ಮೊಗದಿ ತಾಯ್ಗೆ ಜಗವ ತೋರಿ ಮೆರೆದೆಯಾ||


ಸತ್ಯಭಾಮೆ ರುಕ್ಮಿಣಿಯರು

ನಿತ್ಯಸೇವೆ ಮಾಡುತಿರಲು

ಮಿಥ್ಯ ನುಡಿದು ಸತಿಯರೊಳಗೆ ಜಗಳ ತಂದೆಯಾ|

ನೃತ್ಯ ಮಾಡಿ ಹಾವ ಹೆಡೆಲಿ

ಸತ್ಯವಂತರನ್ನು ಸಲಹಿ

ಪೃಥ್ವಿಗಿಳಿದು ಬಂದು ರಜತಪುರದಿ ನಿಂದೆಯಾ||


ನಿನ್ನ ಪೂಜೆ ಮಾಡಲೆನೆಗೆ

ಮುನ್ನ ಶಕ್ತಿಯನ್ನು ನೀಡಿ

ಬನ್ನವನ್ನು ಬಹಳ ಬೇಗ ದೂರ ಮಾಡೆಯಾ|

ಚಿನ್ನ ರನ್ನ ಬೇಡಯೆನಗೆ

ಮನ್ನಿಸೆನ್ನ ತಪ್ಪುಗಳನು

ಘನ್ನಮಹಿಮ ಬೇಡಿಕೊಂಬೆ ಕೃಪೆಯ ದೋರೆಯಾ|




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು