ಶ್ರೀಕೃಷ್ಣ ಭಜನೆ
ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ
ಮುಕುಂದ ಜೋ ಜೋ || ಪ ||
ಪಾಲಗಡಲೊಡಲೊಳು ಪವಡಿಸಿದವನ
ಆಲದೆಲೆಯ ಮೇಲೆ ಮಲಗಿಸಿದ ಶಿಶುವೆ
ಶ್ರೀಲತಾಂಗಿಯಳ ಚಿತ್ತದೊಲ್ಲಭನೆ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ | ೧ |
ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಿ ಥಳಿಸುವ ಗುಲಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನಯ ಮುದ್ದುಬಾಲ
ನಳಿನನಾಭನೆ ನಿನ ಪಾಡಿ ತೂಗುವೆನು ಜೋ ಜೋ | ೨ |
ಯಾರ ಕಂದ ನೀನಾರ ನಿಧಾನಿ
ಯಾರ ರತ್ನವೋ ನೀನಾರ ಮಾಣಿಕವೋ
ಸೇರಿತು ಎನಗೊಂದು ಚಿಂತಾಮಣಿಯಂದು
ಪೋರ ನಿನನು ಪಾಡಿ ತೂಗುವೆನಯ್ಯ ಜೋ ಜೋ ||೩||
ಗುಣನಿಧಿಯ ನಿನನೆತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆಯ ತಂದುಕೊ ಬೇಗ
ಫಣಿ ಶಯನನೆ ನಿನ ಪಾಡಿ ತೂಗುವೆನಯ್ಯ ಜೋ ಜೋ||೪||
ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರವಿಠಲ ಜೋ ಜೋ||೫||
0 ಕಾಮೆಂಟ್‌ಗಳು