|| ಶ್ರೀ ಕೃಷ್ಣ ಭಜನೆ ||
ರಚನೆ : ಪುರಂದರ ದಾಸರು
ರಾಗ : ನಾದನಾಮಕ್ರಿಯ,
ತಾಳ : ಆದಿ
ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ,
ಮಾರಜನಕನ, ಮೋಹನಾಂಗನ,
ಸೇರಿ ಸುಖಿಸಲು ಹಾರೈಸಿ ಬಂದೇವು ||ಪ||
ಬಿಲ್ಲು ಹಬ್ಬವಂತೆ, ಅಲ್ಲಿ ಬೀದಿ ಶೃಂಗಾರವಂತೆ,
ಮಲ್ಲರ ಕಳಗ, ಮದ್ದಾನೆಯಂತೆ,
ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ||೧||
ಮಥುರಾ ಪುರಿಯಂತೆ, ಅಲ್ಲಿ ಮಾವ ಕಂಸನಂತೆ,
ಒದಗಿದ ಮದಗಜ ತುರಗ ಸಾಲಿನಲಿ,
ಮದನಮೋಹನ ಕೃಷ್ಣ ಮಧುರೆಗೆ ತೆರಳಿದ || ೨ ||
ಅತ್ತೆ ಮಾವರ ಬಿಟ್ಟು ಬಂದೆವು ಹಿತ್ತಲ ಬಾಗಿಲಿಂದ,
ಭಕ್ತವತ್ಸಲನ ಬಹು ನಂಬಿದ್ದೆವು,
ಉತ್ಸಾಹ ಭಂಗವ ಮಾಡಿದನಮ್ಮ || ೩ ||
ರಂಗನ ನೆರೆ ನಂಬಿ ಬಂದೆವು, ಸಂಗ ಸುಖವ ಬಯಸಿ,
ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ,
ಮಂಗಳ ಮೂರುತಿ ಮದನ ಗೋಪಾಲನು || ೪ ||
ಶೇಷ ಗಿರಿಯ ಮೇಲೆ, ಹರಿ ತಾ ವಾಸವಗಿಹ ಕಾಣೆ,
ಸಾಸಿರನಾಮದ ಒಡೆಯನೆಂದೆನಿಸಿದ,
ಶ್ರೀಷ ಪುರಂದರ ವಿಟ್ಠಲರಾಯನ || ೫ ||
0 ಕಾಮೆಂಟ್‌ಗಳು