|| ಗಣಪತಿ ಸ್ತುತಿ ||
ರಾಗ: ಶುದ್ಧಸಾವೇರಿ (ದುರ್ಗಾ)
ತಾಳ : ಮಿಶ್ರಛಾಪು
ರಚನೆ: ಶ್ರೀ ಪ್ರಾಣೇಶವಿಠಲರು [1736-1822]
ಲಂಬೋದರ ಪಾಹಿ ಪಾಹಿ ಜಗದ್ಗುರು
ಶಂಭುನಂದನ ಸುರನುತಪಾದ ||ಪ ||
ಯೋಗೀಶಾರ್ಚಿತ ಶ್ರೀಪಾರ್ವತೀಪುತ್ರಾ ನತಮಿತ್ರಾ
ಆಗಸವಾಳ್ದ ಮೂಷಕಾರೂಢಾ
ನಾಗಶಯನನ ಪಾದಧ್ಯಾನದಲ್ಲಿಡು ನಿತ್ಯ
ಶ್ರೀಗಣಪತಿ ನಿನ್ನ ಬಲಗೊಂಬೆ ||೧||
ಶ್ರೀವರ ಶ್ರೀರಾಮಚಂದ್ರ ಧರ್ಮರಾಯ
ದೇವೇಂದ್ರಾ ನಿನ್ನ ಪೂಜಿಸಿದರೊ
ಕೇವಲಾ ಕಲಿದುರ್ಯೋಧನ ಪೂಜಿಸದೆ ಕೆಟ್ಟ
ಶ್ರೀವಿಘ್ನೇಶ್ವರ ನಿನ್ನ ಬಲಗೊಂಬೆ ||೨||
ದನುಜಾರಿ, ಮೋಹಿಸುವುದಕೆ ಸಂಕಟಚೌತಿಗ
-ನೆನಿಸಿ ಪೂಜಿಸಿಕೊಂಬೆ ಖಳರಿಂದ
ಮುನಿವ್ಯಾಸಕೃತ ಗ್ರಂಥಾರ್ಥವ ತಿಳಿದು ಬರೆದಾ
ಗಣರಾಜ ನಿನ್ನ ಪಾದ ಬಲಗೊಂಬೆ ||೩||
ಕಂಬುಚಕ್ರಾಂಕಿತ, ಪಾಶಧರನೇ, ರಕ್ತ -
ಅಂಬರದ್ವಯಭೂಷಾ, ನಿರ್ದೋಷಾ,
ಶಂಬರಾ ರಿಪುಶರಾವಿಜಿತಾ, ಮೃದ್ಭವಗಾತ್ರಾ
ಅಂಬರಾಧಿಪ ನಿನ್ನ ಬಲಗೊಂಬೆ ||೪||
ಏಕವಿಂಶತಿಪುಷ್ಪಾ ನಮನ ಮೋದಕಪ್ರಿಯ
ನೀ ಕರುಣಿಪುದೊ ನಿನ್ನವಾನೆಂದು
ಸಾಕು ವಿಷಯಸುಖಾ ಸುಜನಾರೊಳಾಡಿಸೋ
ಏಕದಂತನೆ ನಿನ್ನ ಬಲಗೊಂಬೆ ||೫||
ಏನು ಬೇಡುವುದಿಲ್ಲಾ ಏನು ಮಾಡುವೋ ಕರ್ಮ
ಶ್ರೀನಿವಾಸನೆ ಮಾಡಿಸುವನೆಂಬೋ
ಜ್ಞಾನವೇ ಎಂದೆಂದಿಗಿರಲಿ ತಾರಕಾಂತ-
ಕಾನನುಜಾ ನಿನ್ನ ಬಲಗೊಂಬೆ ||೬||
ಪ್ರಾಣಸೇವಕ, ಚಾಮೀಕರ ವರ್ಣ, ಗಜಮುಖ
ಪ್ರಾಣೇಶವಿಠಲನಾ ಸುಕುಮಾರಾ
ನೀನೊಲಿದೆಮಗೆ ವಿಘ್ನವ ಪರಿಹರಿಸುತ
ಪೋಣಿಸು ಸನ್ಮತಿ ಬಲಗೊಂಬೆ ||೭||
0 ಕಾಮೆಂಟ್‌ಗಳು