|| ಲಕ್ಷ್ಮಿ ಹಾಡು||
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ
ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ |
ಹರಿಯರಾಣಿ ಭುಜಗವೇಣಿ
ಪರಿಪರಿಯ ಕ್ಲೇಶಗಳಳಿವ
ದುರಿತದೂರನ ಕರಪಿಡಿಯುತ
ಬಾ ಪರಿ ಪರಿ ವೈಭವದಿ||
ವಂದಿಸುವೆ ನಿನ್ನ ಪದಕೆ
ಅಂಬುಜಾಕ್ಷಿ ಕರುಣವ ಮಾಡಿ
ಕಂಬು ಕಂಧರನೊಡಗೂಡುತ
ಬಾಸಂಭ್ರಮ ಸೂಸುತಲಿ||
ಗೆಜ್ಜೆ ಪೈಜನಿ ಪಾಡಗರುಳಿಯು
ಸಜ್ಜಾಗಿಹ ಕಾಲುಂಗುರ ದ್ವನಿಯ
ಮೂರ್ಜಗದೊಡೆಯನ ಕರಪಿಡಿಯುತ
ಬಾ ಸಜ್ಜನ ರಕ್ಷಕಳೆ||
ನಡುವಿಗೆ ನವರತ್ನದ ಪಟ್ಟಿ
ಬಿಡಿಮುತ್ತುಗಳುದುರುವ ಪೀತಾಂಬರ
ಬಡನಡವ ಬಳುಕುತ
ಅಡಿ ಇಡು ಬಾ
ನಿನ್ನೊಡೆಯನ ಕೂಡುತಲಿ ||
ಕರದಲಿ ಕಂಕಣ ಹಾಸರ ಬಳೆಗಳು
ಬೆರಳಲಿ ಉಂಗುರ ಥಳಥಳಿಸುತಲಿ
ಗರುಡಗಮನ ನೊಡಗೂಡುತ ಬಾ
ಗರುವವು ಮಾಡದಲೆ ಬಾ||
ವಂಕಿನಾಗಮುರುಗಿ ಕರದಲಿ
ಬಿಂಕದಿ ಪಿಡಿದಿಹ ತಾವರೆ ಕುಸುಮವು
ಪಂಕಜಾಕ್ಷನೊಡಗೂಡುತ ಮನಶಂಕೆಯು ಮಾಡದಲೆ||
ಕಠ್ಠಾಣಿಸರ ಪದಕಗಳ್ಹೊಳೆಯುತ
ಕಟ್ಟಿದ ಉಂಗುರ ಅಡ್ಡಿಕಿ ಶೋಭಿಸುತ
ಚಿತ್ತಜನಯ್ಯನನೊಡಗೂಡುತ ಬಾ ಮತ್ತೆ ಹರುಷದಲಿ||
ಥಳಥಳಿಸುವ ಗಲ್ಲಕೆ ಅರಿಶಿನವು
ನಲಿಯುವ ಮೂಗುತಿ ಮುಖುರ ಬುಲಾಕು
ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ
ಘಳಿಲನೆ ಬಾರಮ್ಮ ||
ಕುರುಡಿ ಬಾವಲಿ ಬುಗುಡಿ ಚಂದ್ರ ಮುರುವಿನ ಕಾಂತಿ
ಮುಗುಳ್ನಗೆ ಮುಖವು
ಉರುಗಾದ್ರೀಶನ ಕರಪಿಡಿಯುತ
ಬಾಕರೆ ಕರೆ ಮಾಡದಲೆ ||
ಘಣೆಯಲಿ ಕುಂಕುಮ ಬೈತಲೆ ಬಟ್ಟು
ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು
ಎಳೆಬಾಳೆಯ ಸುಳಿಯಂದದಿ ಬಳುಕುತ
ಘಳಿಲನೆ ಬಾರಮ್ಮ|
ಕೆಂಪಿನ ರಾಗುಟಿ ಜಡೆ ಬಂಗಾರವು
ಸಂಪಿಗೆ ಮಲ್ಲಿಗೆ ಸರಗಳ ಮುಡಿದು
ಸೊಂಪಿಲಿ ಶ್ರೀ ಹರಿಯೊಡನಾಡುತ
ನಲಿಯುವ ಸಂತಸ ತೋರಮ್ಮ||
ಇಂದಿರೆ ಶ್ರೀರಮೆ ಭಾರ್ಗವಿಯೆ
ನಂದತ್ರಯಾ ಸದಾಸುಶೀಲೆ
ಸುಗಂಧಿ ಸುಂದರಿ ಮಂದಗಮನೆಯೆ
ಚಂದದಿ ಬಾರಮ್ಮ||
ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ
ಛತ್ರ ಚಾಮರದರ್ಪಣ ಪಿಡಿದು
ನೃತ್ಯಗಾಯನ ಮಾಡುತ ಕರೆವರು ಸತ್ವರ ಬಾರೆನುತ||
ಶ್ರಮ ಪರಿಹರಿಸೆನುತಲಿ ಬೇಡುವೆನು
ಮಮತೆಲಿ ಕರಗಳ ಮುಗಿಯುತ ಬೇಡಲು
ಕಮಲನಾಭ ವಿಠ್ಠಲನೊಡನೆ
ಶ್ರೀ ಕಮಲೆಯು ಬರುತಿಹಳು||
0 ಕಾಮೆಂಟ್‌ಗಳು